HEALTH TIPS

ಅಧಿಕಾರ ಹಸ್ತಾಂತರ: ಮಧ್ಯಪ್ರದೇಶ, ರಾಜಸ್ಥಾನದ ನಂತರ ಬದಲಾದ ಹೈಕಮಾಂಡ್ ತಂತ್ರ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಹಸ್ತಾಂತರ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಸಹಕಾರ ಮತ್ತು ಅದನ್ನು ಹಿರಿಯಣ್ಣನಿಂದ ಆಶೀರ್ವಾದ ಪಡೆದಂತೆ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಅವರ ಗುಣ ಈಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಒಂದೊಮ್ಮೆ ಇದೇ ಸೌಹಾರ್ದವನ್ನು ಮಧ್ಯಪ್ರದೇಶ ಹಾಗೂ ರಾಜಸ್ಥಾನದ ನಾಯಕರು ಪಾಲಿಸಿದ್ದರೆ ಬಹುಶಃ ಅಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಎದುರಿಸುವ ಸ್ಥಿತಿ ಬರುತ್ತಿರಲಿಲ್ಲ ಎಂದು ಉತ್ತರ ಭಾರತೀಯರು ಸಾಮಾಜಿಕ ಮಾಧ್ಯಮದಲ್ಲಿ ವಿಶ್ಲೇಷಿಸುತ್ತಿದ್ದಾರೆ.

ಮಧ್ಯಪ್ರದೇಶ: ಕಮಲ್‌ ನಾಥ್ vs ಜ್ಯೋತಿರಾದಿತ್ಯ ಸಿಂಧಿಯಾ

ಮಧ್ಯಪ್ರದೇಶದಲ್ಲಿ 2018ರ ಚುನಾವಣೆ ನಂತರ ಹಿರಿಯ ನಾಯಕ ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಆಯ್ಕೆ ಮಾಡಿತು. ಆದರೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದ ಮತ್ತು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹಿತಾಸಕ್ತಿಯನ್ನು ಹೈಕಮಾಂಡ್ ಸಂಪೂರ್ಣವಾಗಿ ಕಡೆಗಣಿಸಿತು.

ಅಧಿಕಾರ ಹಸ್ತಾಂತರಕ್ಕೆ ಕಮಲ್‌ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಅವರು ಸಿಂಧಿಯಾ ಅವರನ್ನು ಮೂಲೆಗುಂಪು ಮಾಡಿದಾಗಲೂ ಹೈಕಮಾಂಡ್ ಮಧ್ಯಪ್ರವೇಶಿಸಲಿಲ್ಲ. ಸಿಂಧಿಯಾ ಅವರು ಪಕ್ಷ ತ್ಯಜಿಸುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಹೈಕಮಾಂಡ್‌, ಉದಾಸೀನ ಮದ್ದನ್ನು ಪ್ರಯೋಗಿಸಿತು. ಆದರೆ ಅಲ್ಲಿ ಆಗಿದ್ದೇ ಬೇರೆ. 2020ರಲ್ಲಿ ಸಿಂಧಿಯಾ ಅವರು 22 ಶಾಸಕರೊಂದಿಗೆ ಬಿಜೆಪಿ ಸೇರಿದರು. ಇದರ ಪರಿಣಾಮ ಕಾಂಗ್ರೆಸ್‌ ಸರ್ಕಾರ ಪತನಗೊಂಡಿತು.

ಜ್ಯೋತಿರಾದಿತ್ಯ ಸಿಂಧಿಯಾ, ಕಮಲ್ ನಾಥ್

ರಾಜಸ್ಥಾನ: ಅಶೋಕ್ ಗೆಹಲೋತ್ vs ಸಚಿನ್ ಪೈಲಟ್‌

ರಾಜಸ್ಥಾನದಲ್ಲಿ 2018ರಲ್ಲಿ ಅಶೋಕ್ ಗೆಹಲೋತ್ ಅವರಿಗೆ ಕಾಂಗ್ರೆಸ್ ಸಿಎಂ ಪಟ್ಟ ಕಟ್ಟಿತು. ಯುವ ನಾಯಕ ಸಚಿನ್ ಪೈಲಟ್‌ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಿತು. ಈ ಇಬ್ಬರ ನಡುವೆ ಅಧಿಕಾರ ಹಸ್ತಾಂತರ ಕುರಿತಂತೆ ಯಾವುದೇ ಲಿಖಿತ ಅಥವಾ ಸ್ಪಷ್ಟವಾದ ಒಪ್ಪಂದವನ್ನು ಹೈಕಮಾಂಡ್ ಮಾಡಿಕೊಂಡಿರಲಿಲ್ಲ.

ಆದರೆ ಶಾಸಕರ ಬೆಂಬಲದಿಂದ ಪೈಲಟ್ ಅವರನ್ನು ಗೆಹಲೋತ್ ಕಡೆಗಣಿಸುತ್ತಲೇ ಬಂದರು. ಜತೆಗೆ ಮುಖ್ಯಮಂತ್ರಿ ಕನಸು ಕಾಣುತ್ತಿದ್ದ ಪೈಲಟ್‌ ಆಸೆ ಕಮರುತ್ತಲೇ ಇತ್ತು. ಇದರಿಂದ ಬೇಸತ್ತ ಅವರು 2020ರಲ್ಲಿ ಬಂಡಾಯವೆದ್ದರು. ಇದಕ್ಕೆ ಹೈಕಮಾಂಡ್‌ ತಾತ್ಕಾಲಿಕ ಮುಲಾಮು ಹಚ್ಚಿ ಪರಿಸ್ಥಿತಿ ಶಮನಕ್ಕೆ ಮುಂದಾಯಿತೇ ಹೊರತು, ಸಮಸ್ಯೆಯನ್ನು ಬೇರು ಸಹಿತ ಚಿವುಟಲಿಲ್ಲ. ಇದರ ಪರಿಣಾಮ ಪಕ್ಷ ಅಧಿಕಾರದಲ್ಲಿದ್ದ ಐದೂ ವರ್ಷಗಳು ಇಬ್ಬರು ನಾಯಕರ ನಡುವೆ ಬಹಿರಂಗ ಜಗಳ ಮುಂದುವರಿದೇ ಇತ್ತು. ಈ ಜಗಳದ ಪರಿಣಾಮ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿತು.

ಅಶೋಕ್ ಗೆಹಲೋತ್, ಸಚಿನ್ ಪೈಲಟ್

ಗುಜರಾತ್: ಬಿಜೆಪಿಯಲ್ಲೂ ನಡೆದಿತ್ತು ಅಧಿಕಾರ ಹಸ್ತಾಂತರದ ಬಿಕ್ಕಟ್ಟು

ಖಜುರಿಯಾ, ಹುಜುರಿಯಾ, ಮಜುರಿಯಾ ಎಂದೇ ಹೆಸರಾಗಿದ್ದ 1995ರ ಗುಜರಾತ್ ಪ್ರಕರಣ ಇಂದಿಗೂ ಚರ್ಚೆಯಾಗುತ್ತಲೇ ಇರುತ್ತದೆ. ಆ ವರ್ಷ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಒಟ್ಟು 182 ಸೀಟುಗಳ ಪೈಕಿ 121 ಕ್ಷೇತ್ರಗಳನ್ನು ಗೆದ್ದು ಮೊದಲ ಬಾರಿಗೆ ಬಿಜೆಪಿ ರಾಜ್ಯದಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸಿತು. ಆಗ ಶಂಕರಸಿಂಗ್ ವಘೇಲಾ ಅವರು ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಪ್ರಭಾವಿ ನಾಯಕರಾಗಿದ್ದರು. ಜತೆಗೆ ಮುಖ್ಯಮಂತ್ರಿಯಾಗಬೇಕೆಂಬ ಮಹದಾಸೆಯನ್ನು ಹೊಂದಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಹಿರಿಯ ನಾಯಕ ಕೇಶುಭಾಯ್ ಪಟೇಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತು. ಇದು ವಘೇಲಾ ಅವರ ಅಸಮಾಧಾನಕ್ಕೆ ಕಾರಣವಾಯಿತು.

ಕೇಶುಭಾಯ್ ಪಟೇಲ್ ಮುಖ್ಯಮಂತ್ರಿಯಾಗಿ ಆಗಿ ಕೇವಲ ಏಳು ತಿಂಗಳಾಗಿದ್ದಾಗ ವಘೇಲಾ ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಂಡಾಯವೆದ್ದರು. ತಮ್ಮ ಬೆಂಬಲಿತ 47 ಕ್ಕೂ ಹೆಚ್ಚು ಬಿಜೆಪಿ ಶಾಸಕರನ್ನು ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಮಧ್ಯಪ್ರದೇಶದ ಖಜುರಾಹೋ ರೆಸಾರ್ಟ್‌ಗೆ ಕರೆದೊಯ್ದರು. ಕೇಶುಭಾಯ್ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಬೇಡಿಕೆ ಹೊಂದಿದ್ದ ಈ ಬಣಕ್ಕೆ ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಅವರ ಮೂಲಕ ಭದ್ರತೆಯೂ ದೊರಕಿತು.

ಈ ಸಂದರ್ಭದಲ್ಲಿ ಅಟಲ್ ಬಿಹಾರ ವಾಜಪೇಯಿ ಅವರ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆಯಿತು. ಆದರೆ ಈ ಬಂಡಾಯದಿಂದ ಗುಜರಾತ್‌ನ ಬಿಜೆಪಿಯಲ್ಲಿ ಮೂರು ಬಣಗಳಾದವು. ವಘೇಲಾ ಬಣಕ್ಕೆ ಖಜುರಿಯಾ, ಕೇಶುಭಾಯ್‌ ಅವರ ನಿಷ್ಠಾವಂತ ಶಾಸಕರನ್ನು ಹಜುರಿಯಾ (ಜೀ ಹುಜೂರ್‌ ಎಂದೆನ್ನುತ್ತಾರೆ ಎಂದು ವ್ಯಂಗ್ಯವಾಗಿ ಕರೆಯಲಾಗಿತ್ತು) ಮತ್ತು ಇವೆರೆಡೂ ಬಣಕ್ಕೆ ಸೇರದವರನ್ನು ಮಜುರಿಯಾ ಎಂದು ಕರೆಯಲಾಗಿತ್ತು.

1996ರಲ್ಲಿ ಮತ್ತೆ ಬಂಡಾಯ ಸಾರಿದ ವಘೇಲಾ ಅವರನ್ನು ಕೇಶುಭಾಯ್ ಬೆಂಬಲಿಗರು ಗೋಧ್ರಾ ಕ್ಷೇತ್ರದಿಂದ ಸೋಲುವಂತೆ ಮಾಡಿದರು. ಇದರಿಂದ ಕೆರಳಿದ ವಘೇಲಾ ಬಿಜೆಪಿಯಿಂದ ಹೊರಬಂದು ರಾಷ್ಟ್ರೀಯ ಜನತಾ ಪಾರ್ಟಿ (ಆರ್‌ಜೆಪಿ) ಕಟ್ಟಿದರು. ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿದ ವಘೇಲಾ ಒಂದು ವರ್ಷ ಮಾತ್ರ ಸರ್ಕಾರ ನಡೆಸಲು ಶಕ್ತರಾದರು.

ಕರ್ನಾಟಕ: ಸಿದ್ದರಾಮಯ್ಯ - ಡಿ.ಕೆ. ಶಿವಕುಮಾರ್ ಜೋಡೆತ್ತಿನ ಯಶಸ್ಸು

ಈ ಕಹಿ ಬೆಳವಣಿಗೆಯ ಬೆನ್ನಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತು. ಇಲ್ಲಿಯೂ ಅಹಿಂದ ಹೋರಾಟದ ಹಿನ್ನೆಲೆಯ ಸಿದ್ದರಾಮಯ್ಯ ಹಾಗೂ ಯುವ ನಾಯಕ ಡಿ.ಕೆ. ಶಿವಕುಮಾರ್ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜೋಡೆತ್ತಿನಂತೆ ಒಗ್ಗಟ್ಟು ಪ್ರದರ್ಶಿಸಿ ರಾಜ್ಯದ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು.

ಪಕ್ಷ ಅಧಿಕಾರಕ್ಕೆ ಬಂದ ನಂತರವೂ ಹೈಕಮಾಂಡ್ ಮುಂದೆ ಬಂದಿದ್ದು ಅದೇ ಸವಾಲು. ಸಂಘಟನಾ ಶಕ್ತಿಯುಳ್ಳ ಸಿದ್ದರಾಮಯ್ಯ ಮತ್ತು ನಿಷ್ಠಾವಂತ ನಾಯಕ ಡಿ.ಕೆ. ಶಿವಕುಮಾರ್ ನಡುವಿನ ಆಯ್ಕೆಯ ಕಗ್ಗಂಟು. ಆರಂಭದಲ್ಲಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಮಾಡಿತು. ಇಲ್ಲಿಯೂ ಅಧಿಕಾರ ಹಸ್ತಾಂತರದ್ದೇ ಚರ್ಚೆ.

ಆದರೆ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸೋಲಿನ ಪಾಠದಿಂದ ಎಚ್ಚೆತ್ತಿದ್ದ ಕಾಂಗ್ರೆಸ್ ಹೈಕಮಾಂಡ್, ಅಧಿಕಾರ ಹಸ್ತಾಂತರ ಸೂತ್ರವನ್ನು ಸರಳಗೊಳಿಸುವ ಹಾದಿಯಲ್ಲಿ ಸಾಗಿದೆ. ಆದರೆ ಕರ್ನಾಟಕದ ಈ ಇಬ್ಬರು ನಾಯಕರ ನಡೆಗೆ ಇತರ ರಾಜ್ಯಗಳ ನಾಯಕರು ಹಾಗೂ ಜನರು ತಲೆತೂಗಿದ್ದಾರೆ.

ಅಧಿಕಾರ ಬಿಟ್ಟುಕೊಡುವಂತೆ ಹೈಕಮಾಂಡ್ ಕೇಳುತ್ತಿದ್ದಂತೆ ತಡ ಮಾಡದೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರ ಹೃದಯ ವೈಶಾಲತೆ ಮತ್ತು ನಿರ್ಗಮಿತ ಮುಖ್ಯಮಂತ್ರಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ರೀತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಇಬ್ಬರು ನಾಯಕರ ನಡುವಿನ ಬಿಕ್ಕಟ್ಟು ತಾರಕಕ್ಕೇರಿ ಬಂಡಾಯದ ಬಾವುಟ ಹಾರುವವರೆಗೂ ಹೈಕಮಾಂಡ್ ಕಾಯಲಿಲ್ಲ. ಕಳೆದ ಮೂರು ವರ್ಷಗಳಲ್ಲಿ ಎರಡೂ ಬಣಗಳ ಬೆಂಬಲಿಗ ಶಾಸಕರು ಸಿಎಂ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ನೀಡಿದಾಗಲೇ ಮಧ್ಯಪ್ರವೇಶಿಸಿದ ಎಐಸಿಸಿ ಉಸ್ತುವಾರಿಗಳು ಎಚ್ಚರಿಕೆ ನೀಡಿದರು. ಸಾರ್ವಜನಿಕರಲ್ಲಿ ಸರ್ಕಾರದ ಕುರಿತು ಯಾವುದೇ ಗೊಂದಲ ಮೂಡದಂತೆ ಎಚ್ಚರ ವಹಿಸಿದರು.

ಅಧಿಕಾರ ಹಸ್ತಾಂತರ ಸಂದರ್ಭದಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಸುದೀರ್ಘ ಹಾಗೂ ಸರಣಿ ಸಭೆಗಳನ್ನು ನಡೆಸಿದರು. ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆಗೆ ಬರುವಂತೆ ಆಹ್ವಾನವನ್ನೂ ಒಳಗೊಂಡು ಯಾವುದೇ ಅಸಮಾಧಾನವಾಗದಂತೆ ಗೌರವಾನ್ವಿತ ಸ್ಥಾನಮಾನ ನೀಡುವ ಭರವಸೆ ನೀಡಿದರು. 2029ರ ಲೋಕಸಭಾ ಚುನಾವಣೆ ದೃಷ್ಟಿಯಿಮದ ರಾಷ್ಟ್ರ ರಾಜರಾಜಕಾರಣದಲ್ಲಿ ಪ್ರಮುಖ ಜವಾಬ್ದಾರಿ ನೀಡುವುದಾಗಿಯೂ ಹೇಳಿದರು.

ಜತೆಗೆ ಬೆಂಬಲಿಗರಾದ ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ತಮ್ಮ ಮಗ ಡಾ. ಯತೀಂದ್ರ ಅವರಿಗೆ ಸೂಕ್ತ ರಾಜಕೀಯ ರಕ್ಷಣೆ ಇತ್ಯಾದಿಗಳಿಗೂ ಹೈಕಮಾಂಡ್ ಅಸ್ತು ಎಂದಿದೆ ಎಂಬ ಚರ್ಚೆಗಳೂ ನಡೆದಿವೆ.

ಅಧಿಕಾರ ಬಯಸಿದ ಇಬ್ಬರು ನಾಯಕರ ನಡುವೆ ಕಾರ್ಪೊರೇಟ್ ಶೈಲಿಯಲ್ಲಿ ಸಮಾನ ಪ್ರಾಮುಖ್ಯತೆ ನೀಡುವ ಸೂತ್ರದಂತೆ ಅಧಿಕಾರ ಹಸ್ತಾಂತರ ಪ್ರಮುಖ ಘಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ. ಆದರೆ ಮುಂದಿನ ಸಿಎಂ ಯಾರು ಎಂಬ ಕುತೂಹಲ ಈಗಲೂ ಮುಂದುವರಿದಿದೆ.

ಲೋಕಭವನಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಎಲ್ಲಿಯೂ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಹೇಳಿಲ್ಲ. ಆದರೆ ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿ ದೆಹಲಿಗೆ ದೌಡಾಯಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ಆಯ್ಕೆಯನ್ನು ಕಾಂಗ್ರೆಸ್ ಸುಸೂತ್ರವಾಗಿ ನಡೆಸಲಿದೆಯೇ ಎಂಬ ಪ್ರಶ್ನೆ ಹಾಗೇ ಉಳಿದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries