ತೈಪೆ: ಹಳದಿ ಸಮುದ್ರದಿಂದ ದಕ್ಷಿಣ ಚೀನಾ ಸಮುದ್ರ ಮತ್ತು ಪಶ್ಚಿಮ ಪೆಸಿಫಿಕ್‌ವರೆಗೆ ವಿಸ್ತರಿಸಿರುವ ಪ್ರಾದೇಶಿಕ ಸಾಗರ ವ್ಯಾಪ್ತಿಯಲ್ಲಿ ಚೀನಾವು ನೂರಕ್ಕೂ ಅಧಿಕ ನೌಕಪಡೆ, ಕರಾವಳಿ ಕಾವಲು ಪಡೆಯ ಹಡಗುಗಳನ್ನು ನಿಯೋಜಿಸಿದೆ ಎಂದು ತೈವಾನ್‌ನ ಭದ್ರತಾ ಮುಖ್ಯಸ್ಥ ಜೋಸೆಫ್ ವು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೋಸೆಫ್ ವು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಚೀನಾಗೆ ಭೇಟಿ ನೀಡಿದ್ದರು. ಆ ವೇಳೆ ಬೀಜಿಂಗ್‌ನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಸಭೆ ನಡೆಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಚೀನಾವು ತನ್ನ ಹಡಗುಗಳನ್ನು ನಿಯೋಜನೆ ಮಾಡಿದೆ ಎಂದು ಹೇಳಿದ್ದಾರೆ.
ಚೀನಾವು ಈ ಭಾಗದ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆ ಹಾಕುವ ಏಕೈಕ ದೇಶವಾಗಿದೆ ಎಂದು ಆರೋಪಿಸಿದ್ದಾರೆ.
ತೈವಾನ್‌ನೊಂದಿಗೆ ಶಸ್ತ್ರಾಸ್ತ್ರ ವ್ಯಾಪಾರಕ್ಕೆ ಅಮೆರಿಕ ಮುಂದಾಗಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಟ್ರಂಪ್ , 'ನಾನು ಎಲ್ಲರೊಂದಿಗೂ ಮಾತನಾಡುತ್ತೇನೆ. ಅವರೊಂದಿಗೂ ಮಾತನಾಡುತ್ತೇನೆ. ತೈವಾನ್ ಸಮಸ್ಯೆ ಬಗೆಹರಿಸುವ ಕುರಿತು ಕೆಲಸ ಮಾಡುತ್ತೇನೆ' ಎಂದು ಹೇಳಿದ್ದರು.
ತೈವಾನ್ ತನ್ನ ಭೂಪ್ರದೇಶದ ಭಾಗ, ಅದನ್ನು ವಶಪಡಿಸಿಕೊಳ್ಳಲು ನಾವು ಸೇನೆಯನ್ನು ಬೇಕಾದರೂ ಬಳಸಿಕೊಳ್ಳುತ್ತೇವೆ ಎಂದು ಚೀನಾ ಹೇಳಿಕೊಳ್ಳುತ್ತಲೇ ಬಂದಿದೆ.

