HEALTH TIPS

ವ್ಯಾಪಾರ, ಹೂಡಿಕೆ| ಸಹಕಾರ ವೃದ್ಧಿಗೆ ಪಣ: ಮೋದಿ, ಮೆಲೊನಿ ಹೇಳಿಕೆ

ರೋಮ್‌: ವ್ಯಾಪಾರ, ಹೂಡಿಕೆ ಹಾಗೂ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಸಲು ಹಾಗೂ ಮೈತ್ರಿಯನ್ನು ವಿಶೇಷ ಪಾಲುದಾರಿಕೆ ಮಟ್ಟಕ್ಕೆ ಕೊಂಡೊಯ್ಯಲು ಭಾರತ ಹಾಗೂ ಇಟಲಿ ಮಂಗಳವಾರ ನಿರ್ಧರಿಸಿದವು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಮಾತುಕತೆ ನಡೆಸಿದ ಬಳಿಕ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಈ ಮಾತು ಹೇಳಿದ್ದಾರೆ.

ಮೆಲೊನಿ ಅವರ ಜೊತೆ ಮಾತುಕತೆಗೂ ಮುನ್ನ ಮಾತನಾಡಿದ ಮೋದಿ,'ಭಾರತ ಮತ್ತು ಇಟಲಿ ನಡುವಿನ ಸಹಕಾರ ವೃದ್ಧಿ ಕುರಿತು ಮಾತುಕತೆ ನಡೆಸಲಾಗುವುದು. ವಿಶೇಷವಾಗಿ ಭಾರತ-ಪಶ್ಚಿಮ ಏಷ್ಯಾ-ಯುರೋಪ್‌ ಆರ್ಥಿಕ ಕಾರಿಡಾರ್‌(ಐಎಂಇಸಿ) ಯೋಜನೆಗೆ ಒತ್ತು ನೀಡಲಾಗುವುದು' ಹೇಳಿದರು.

'ಜಂಟಿ ಕ್ರಿಯಾ ಯೋಜನೆ 2025-2029 ಅನ್ನು ಉಭಯ ದೇಶಗಳು ಮರುಪರಿಶೀಲನೆ ನಡೆಸಲಿವೆ. ಆ ಮೂಲಕ ವಿವಿಧ ಕ್ಷೇತ್ರಗಳಲ್ಲಿನ ಸಹಕಾರ ವೃದ್ಧಿಗೆ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿದಂತಾಗಲಿದೆ' ಎಂದು ಮೋದಿ ಅವರು ಹೇಳಿದ್ದಾರೆ.

ದ್ವಿಪಕ್ಷೀಯ ವ್ಯಾಪಾರ ಗಟ್ಟಿ: ಇಡೀ ಐರೋಪ್ಯ ಒಕ್ಕೂಟದಲ್ಲಿ, ಇಟಲಿಯು ಭಾರತದ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರ. ಭಾರತ ಮತ್ತು ಇಟಲಿ ನಡುವಿನ ದ್ವಿಪಕ್ಷೀಯ ವ್ಯಾಪಾರವು ಇತ್ತೀಚಿನ ವರ್ಷಗಳಲ್ಲಿ ಏರಿಕೆ ಕಂಡಿದೆ. 2025ರಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರವು ₹1.60 ಲಕ್ಷ ಕೋಟಿ ತಲುಪಿತ್ತು.

ಭಾರತದಿಂದ ಇಟಲಿಗೆ ರಫ್ತು ಕೂಡ ಹೆಚ್ಚಳವಾಗಿದೆ. ಕಳೆದ ವರ್ಷ ಭಾರತದಿಂದ ಇಟಲಿಗೆ ರಫ್ತಿನ ಪ್ರಮಾಣ ₹96 ಸಾವಿರ ಕೋಟಿ (ಅಂದಾಜು 8.55 ಶತಕೋಟಿ ಯುರೊ) ಇದ್ದರೆ, ಇಟಲಿಯು ಭಾರತಕ್ಕೆ ₹64 ಸಾವಿರ ಕೋಟಿ (ಅಂದಾಜು 5.70 ಯುರೊ) ಮೊತ್ತದ ಸರಕು ರಫ್ತು ಮಾಡಿದೆ.

ಇಟಲಿಯಲ್ಲಿ ವಾಸಿಸುತ್ತಿರುವ ಭಾರತೀಯರ ಸಂಖ್ಯೆಯೂ ದೊಡ್ಡದು. 2025ರ ಜನವರಿಯಲ್ಲಿ ದಾಖಲಾದ ಮಾಹಿತಿಯಂತೆ, ಇಟಲಿಯಲ್ಲಿ 1,86,833 ಭಾರತೀಯರು ನೆಲಸಿದ್ದಾರೆ. ಇಟಲಿಯ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯರ ಸಂಖ್ಯೆ 5,100.

'ನಿರ್ಣಾಯಕ ಹಂತಕ್ಕೆ ಭಾರತ ಇಟಲಿ ಬಾಂಧವ್ಯ'

ನವದೆಹಲಿ: 'ಭಾರತ ಮತ್ತು ಇಟಲಿ ನಡುವಿನ ಬಾಂಧವ್ಯ ಈಗ ನಿರ್ಣಾಯಕ ಹಂತ ತಲುಪಿದೆ. ಉಭಯ ದೇಶಗಳ ನಡುವಿನ ಸೌಹಾರ್ದಯುತ ಮೈತ್ರಿಯು ಈಗ ವಿಶೇಷವಾದ ರಕ್ಷಣಾತ್ಮಕ ಪಾಲುದಾರಿಕೆಯಾಗಿ ಹೊರಹೊಮ್ಮಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಪ್ರತಿಪಾದಿಸಿದ್ದಾರೆ.

ಉಭಯ ನಾಯಕರು ಭಾರತ ಮತ್ತು ಇಟಲಿ ಮಾಧ್ಯಮಗಳಿಗೆ ಜಂಟಿಯಾಗಿ ಬರೆದಿರುವ ಲೇಖನದಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ. 'ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಸಂಬಂಧಗಳು ಹಾಗೂ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿವೆ. ಆದರೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿನಿರಂತರ ವಿನಿಮಯಗಳಿಂದಾಗಿ ಭಾರತ ಮತ್ತು ಇಟಲಿ ನಡುವಿನ ಪಾಲುದಾರಿಕೆ ಗಟ್ಟಿಗೊಂಡಿದೆ' ಎಂದು ಮೋದಿ ಹಾಗೂ ಮೆಲೊನಿ ಹೇಳಿದ್ದಾರೆ.

'ಕ್ರಿಯಾಶೀಲವಾದ ಆರ್ಥಿಕತೆ ಸೃಜನಶೀಲತೆಯಿಂದ ಕೂಡಿದ ಸಾಮಾಜಿಕ ವ್ಯವಸ್ಥೆ ಹಾಗೂ ಶತಮಾನಗಳಷ್ಟು ಹಳೆಯದಾದ ನಮ್ಮ ನಾಗರಿಕತೆಗಳು ಹೊಂದಿರುವ ಜ್ಞಾನ ಮತ್ತು ಅನುಭವದಿಂದಾಗಿ ಉಭಯ ದೇಶಗಳ ನಡುವಿನ ಬಾಂಧವ್ಯ ಹೊಸ ಎತ್ತರಕ್ಕೆ ಏರಿದೆ' ಎಂದು ಅವರು ಬರೆದಿದ್ದಾರೆ. 'ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಸದೃಢಗೊಳಿಸಲು ನಾವು ಬದ್ಧರಾಗಿದ್ದೇವೆ. ವಿನ್ಯಾಸ ಹಾಗೂ ತಯಾರಿಕೆ ಕ್ಷೇತ್ರದಲ್ಲಿ ಇಟಲಿಯ ಸಾಮರ್ಥ್ಯ ಅಗಾಧವಾದುದು. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದ ಭಾರತದಲ್ಲಿ ಎಂಜಿನಿಯರಿಂಗ್‌ ಪ್ರತಿಭೆಗಳಿಗೆ ಕೊರತೆ ಇಲ್ಲ. ಉದ್ಯಮಶೀಲತೆಗೆ ಪೂರಕವಾದ ಪರಿಸರವೂ ಇದೆ. ಈ ಸಾಮರ್ಥ್ಯಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸುವುದು ಎರಡೂ ದೇಶಗಳ ಗುರಿಯಾಗಿದೆ' ಎಂದು ಅವರು ಲೇಖನದಲ್ಲಿ ವಿವರಿಸಿದ್ದಾರೆ.

ಲೇಖನದ ಪ್ರಮುಖ ಅಂಶಗಳು

  • ಭಾರತ ಮತ್ತು ಇಟಲಿ ನಡುವಿನ ವ್ಯಾಪಾರದ ಪ್ರಮಾಣವನ್ನು 2029ರ ವೇಳೆಗೆ ₹2.24 ಲಕ್ಷ ಕೋಟಿಗೆ ತಲುಪಿಸುವ ಗುರಿ ಹೊಂದಲಾಗಿದೆ

  • ರಕ್ಷಣೆ ಏರೋಸ್ಪೇಸ್‌ ಶುದ್ಧ ತಂತ್ರಜ್ಞಾನಗಳು ಆಟೊಮೋಟಿವ್ ಬಿಡಿಭಾಗಗಳ ತಯಾರಿಕೆ ರಾಸಾಯನಿಕಗಳು ಔಷಧಗಳು ಜವಳಿ ಕೃಷಿ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಣೆ

  • ಕೃತಕ ಬುದ್ಧಿಮತ್ತೆಯ(ಎ.ಐ) ಅಭಿವೃದ್ಧಿ ಮತ್ತು ಬಳಕೆಯು ಮಾನವ ಕೇಂದ್ರಿತವಾಗಿರಬೇಕು. ಇದನ್ನು ಖಾತ್ರಿಪಡಿಸಲು ಉಭಯ ದೇಶಗಳು ಶ್ರಮಿಸಲಿವೆ

  • ಡಿಜಿಟಲ್ ಕ್ಷೇತ್ರದಲ್ಲಿ ಸಹಕಾರ ಸೈಬರ್‌ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು

  • ಭಾರತವು ಬಾಹ್ಯಾಕಾಶ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಅಂತರಿಕ್ಷ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇಟಲಿಯ ಸಾಧನೆ ದೊಡ್ಡದು. ಉಭಯ ದೇಶಗಳ ನಡುವಿನ ಸಹಕಾರ ವೃದ್ಧಿಯಿಂದ ಈ ಕ್ಷೇತ್ರಗಳಲ್ಲಿ ವಿಪುಲ ಉದ್ಯೋಗಾವಕಾಶ ಸೃಷ್ಟಿ ಸಾಧ್ಯ

  • ಭಾರತೀಯ ಸಂಸ್ಕೃತಿಯಲ್ಲಿರುವ 'ಧರ್ಮ'ದ ಪರಿಕಲ್ಪನೆ ಪ್ರತಿಯೊಬ್ಬರಲ್ಲಿ ಹೊಣೆಗಾರಿಕೆಯನ್ನು ಜಾಗೃತಗೊಳಿಸುತ್ತದೆ. 'ವಸುಧೈವ ಕುಟುಂಬಕಂ' ತತ್ವವು ವಿಶ್ವವೇ ಒಂದು ಕುಟುಂಬವೆಂದು ಸಾರುತ್ತದೆ. ಇಟಲಿಯ ಪರಂಪರೆ ಕೂಡ ಇವೇ ಮೌಲ್ಯಗಳನ್ನು ಪ್ರತಿಧ್ವನಿಸುತ್ತದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries