ನವದೆಹಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣದ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದ್ದು, ವಿವಾದಿತ ಜಾಗ ವಾಗ್ದೇವಿ ಸರಸ್ವತಿ ದೇವಿಯ ದೇವಸ್ಥಾನ ಎಂದು ಘೋಷಿಸಿದೆ. ಜತೆಗೆ, ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಜಮೀನು ಕೋರಲು ಅವಕಾಶ ಕಲ್ಪಿಸಿದೆ.
ಧಾರ್ ಜಿಲ್ಲೆಯಲ್ಲಿರುವ ಈ ಆಸ್ತಿಯ ಆಡಳಿತ ನಿರ್ವಹಣೆ ಮತ್ತು ಸಂಸ್ಕೃತ ಕಲಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪೀಠವು ತಿಳಿಸಿದೆ.
ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ, ಪ್ರತಿವಾದಿಗಳು ಧಾರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಸೂಕ್ತ ಜಮೀನು ಕೋರಿ ಅರ್ಜಿ ಸಲ್ಲಿಸಿದರೆ, ಸರ್ಕಾರವು ಅದನ್ನು ಕಾನೂನಿನ ಪ್ರಕಾರ ಪರಿಶೀಲಿಸಬಹುದು ಎಂದು ಪೀಠವು ಹೇಳಿದೆ.
ವಾರದ ಬೇರೆ ಬೇರೆ ದಿನಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಇಬ್ಬರಿಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದ್ದ 2003ರ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಆದೇಶವನ್ನು ನ್ಯಾಯಾಲಯವು ರದ್ದುಗೊಳಿಸಿದೆ ಮತ್ತು ಭೋಜಶಾಲಾದಲ್ಲಿ ಮುಸ್ಲಿಮರ ನಮಾಜ್ ಅನ್ನು ನಿಲ್ಲಿಸುವಂತೆಯೂ ಆದೇಶಿಸಿದೆ.
ಏನಿದು ವಿವಾದ?
ಹಿಂದೂ ಸಮುದಾಯವು ಭೋಜಶಾಲಾವನ್ನು ವಾಗ್ದೇವಿ ಸರಸ್ವತಿ ದೇವಿಗೆ ಅರ್ಪಿತವಾದ ದೇವಸ್ಥಾನ ಎಂದು ಪರಿಗಣಿಸಿದರೆ, ಮುಸ್ಲಿಂ ಸಮುದಾಯವು ಇದನ್ನು ಕಮಲ್ ಮೌಲಾ ಮಸೀದಿ ಎಂದು ಗುರುತಿಸುತ್ತದೆ. ಈ ಮಧ್ಯೆ, ಜೈನ ಸಮುದಾಯದ ಅರ್ಜಿದಾರರೊಬ್ಬರು ಈ ಸಂಕೀರ್ಣವು ಮಧ್ಯಕಾಲೀನ ಜೈನ ದೇವಾಲಯ ಮತ್ತು ಗುರುಕುಲ ಎಂದು ಪ್ರತಿಪಾದಿಸಿದ್ದಾರೆ.
2003ರ ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಆದೇಶದಂತೆ ಹಿಂದೂಗಳು ಮಂಗಳವಾರ ಮತ್ತು ಮುಸ್ಲಿಮರು ಶುಕ್ರವಾರದಂದು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.
ಈ ವ್ಯವಸ್ಥೆಯನ್ನು ಪ್ರಶ್ನಿಸಿ ಹಿಂದೂ ಪರ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು ಮತ್ತು ತಮಗೆ ಸಂಪೂರ್ಣ ಪೂಜಾ ಹಕ್ಕು ನೀಡಬೇಕೆಂದು ಕೋರಿದ್ದರು.
2024ರ ಮಾರ್ಚ್ 11ರಂದು ಹೈಕೋರ್ಟ್ ಈ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿತ್ತು. ಮಾರ್ಚ್ 22ರಿಂದ ಆರಂಭವಾದ ಈ ಸಮೀಕ್ಷೆಯು 98 ದಿನಗಳ ಕಾಲ ನಡೆದಿತ್ತು. ಎಎಸ್‌ಐ ಇತ್ತೀಚೆಗೆ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆ ವರದಿಯ ಆಧಾರದ ಮೇಲೆ ಇಂದು ಈ ತೀರ್ಪು ಹೊರಬಿದ್ದಿದೆ.
ಭೋಜಶಾಲಾ ಸರಸ್ವತಿ ದೇವಿಯ ದೇಗುಲ ಎಂಬುದು ಹಿಂದೂಗಳ ನಂಬಿಕೆಯಾಗಿದೆ. ಮುಸ್ಲಿಂ ಸಮುದಾಯವು ಈ ಕಟ್ಟಡ ಕಮಲ್ ಮೌಲಾ ಮಸೀದಿ ಎಂದು ಪರಿಗಣಿಸಿತ್ತು.

