ಕೀವ್: ಉಕ್ರೇನ್ ರಾಜಧಾನಿ ಕೀವ್ ಹಾಗೂ ಇತರ ನಗರಗಳ ಮೇಲೆ ಸೋಮವಾರ ತಡರಾತ್ರಿ ರಷ್ಯ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿಗಳ ಸುರಿಮಳೆಯಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವು ಕಟ್ಟಡಗಳು ನೆಲಸಮಗೊಂಡಿದ್ದು ಕಟ್ಟಡಗಳ ಅವಶೇಷಗಳಡಿ ಕೆಲವರು ಸಿಕ್ಕಿಬಿದ್ದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಸೋಮವಾರ ತಡರಾತ್ರಿಯಿಂದ ಪ್ರಾರಂಭಗೊಂಡ ದಾಳಿ ಮಂಗಳವಾರ ಬೆಳಗ್ಗಿನವರೆಗೂ ಮುಂದುವರಿದಿದ್ದು ಸ್ಫೋಟಗಳ ಸದ್ದು ಹಲವು ನಗರಗಳಲ್ಲಿ ಕೇಳಿಬಂದಿದೆ. ಉಕ್ರೇನ್‍ನಾದ್ಯಂತ 656 ಡ್ರೋನ್ ಹಾಗೂ 73 ಕ್ಷಿಪಣಿ ದಾಳಿ ನಡೆದಿದ್ದು ಉಕ್ರೇನ್‍ನ ವಾಯುರಕ್ಷಣಾ ವ್ಯವಸ್ಥೆ 602 ಡ್ರೋನ್‍ಗಳು ಹಾಗೂ 40 ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಕೀವ್, ಡ್ನಿಪ್ರೊ, ಪೂರ್ವದ ನಗರಗಳಾದ ಪೊಲ್ಟಾವ, ಖಾರ್ಕಿವ್ ಮತ್ತು ಝಪೋರಿಝಿಯಾ ದಾಳಿಯ ಮುಖ್ಯ ಗುರಿಗಳಾಗಿದ್ದವು.
ಡ್ನಿಪ್ರೋ ನಗರದಲ್ಲಿ 12 ಮತ್ತು ಕೀವ್ ನಗರದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೀವ್ ನಗರದಲ್ಲೇ 65ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಹಲವು ಕಟ್ಟಡಗಳು, ವಾಹನಗಳು, ಮನೆಗಳು ಹಾನಿಗೊಂಡಿವೆ. ಮಧ್ಯ ಉಕ್ರೇನ್‍ನ ಡ್ನಿಪ್ರೋ ನಗರದಲ್ಲಿ ಕುಸಿದು ಬಿದ್ದ ಅಪಾರ್ಟ್‍ಮೆಂಟ್ ಕಟ್ಟಡದ ಅವಶೇಷಗಳಡಿಯಿಂದ 3 ವರ್ಷದ ಮಗು, ತಾಯಿ ಮತ್ತು 8 ವರ್ಷದ ಬಾಲಕನ ಮೃತದೇಹವನ್ನು ತುರ್ತು ಕಾರ್ಯಪಡೆ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ ನಗರವನ್ನು ಗುರಿಯಾಗಿಸಿ ಬೃಹತ್ ವೈಮಾನಿಕ ದಾಳಿ ನಡೆಯಲಿರುವ ಕಾರಣ ವಿದೇಶಿ ರಾಜತಾಂತ್ರಿಕರು ರಾಜಧಾನಿಯನ್ನು ತಕ್ಷಣ ತೊರೆಯಬೇಕು ಎಂದು ರಷ್ಯ ಕೆಲ ದಿನಗಳ ಹಿಂದೆ ಎಚ್ಚರಿಕೆ ನೀಡಿತ್ತು. ಕೀವ್, ಝಪೋರಿಜಿಯಾ, ಖಾರ್ಕಿವ್, ಡ್ನಿಪ್ರೊಪೆಟ್ರೋವ್ಸ್ಕ್, ಪೊಲ್ಟಾವಾ, ಖೆಮೆಲ್ನಿಟ್ಸ್ಕ್ ಮತ್ತು ಸುಮಿ ಪ್ರದೇಶಗಳಲ್ಲಿ ಮಿಲಿಟರಿ- ಕೈಗಾರಿಕಾ ಸೌಲಭ್ಯಗಳ ಮೇಲೆ ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರಗಳೊಂದಿಗೆ ನಿಖರವಾದ ದಾಳಿ ನಡೆಸಲಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ.
ಉಕ್ರೇನ್‍ಗೆ ವಾಯುರಕ್ಷಣಾ ಕ್ಷಿಪಣಿಗಳ ಕೊರತೆ
ಉಕ್ರೇನ್‍ಗೆ ಅಮೆರಿಕ ನಿರ್ಮಿತ ಪೇಟ್ರಿಯಾಟ್ ವಾಯುರಕ್ಷಣಾ ಕ್ಷಿಪಣಿಗಳ ಕೊರತೆ ಎದುರಾಗಿದ್ದು ಇದರ ಸಂಪೂರ್ಣ ಲಾಭವನ್ನು ಪಡೆಯಲು ರಷ್ಯ ಪ್ರಯತ್ನಿಸುತ್ತಿದೆ. ಇರಾನ್ ಯುದ್ಧದಿಂದಾಗಿ ಅಮೆರಿಕದ ಬಳಿ ಪೇಟ್ರಿಯಾಟ್ ವಾಯುರಕ್ಷಣಾ ವ್ಯವಸ್ಥೆಯ ಅಂತರರಾಷ್ಟ್ರೀಯ ದಾಸ್ತಾನು ಖಾಲಿಯಾಗಿದ್ದು ಉಕ್ರೇನ್‍ಗೆ ಭಾರೀ ಹಿನ್ನಡೆಯಾಗಿದೆ.
ಅಮೆರಿಕ ಮತ್ತು ಯುರೋಪ್‍ನಿಂದ ಹೆಚ್ಚಿನ ಬೆಂಬಲಕ್ಕಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ವಿನಂತಿಸಿದ್ದು, ಉಕ್ರೇನ್ ಅನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಇತರ ದಾಳಿಗಳಿಂದ ರಕ್ಷಿಸದಿದ್ದರೆ ಇಂತಹ ದಾಳಿಗಳು ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.

