ಬ್ರಾಟಿಸ್ಲಾವಾ: ಸುಧಾರಣೆಗೊಳ್ಳಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನವನ್ನು ಸ್ಲೊವಾಕಿಯಾ ದೇಶ ಬೆಂಬಲಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ಲೊವಾಕಿಯಾಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಪ್ರಧಾನಿ ರಾಬರ್ಟ್ ಫಿಕೊ ಅವರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಎರಡೂ ದೇಶಗಳು ತಮ್ಮ ಸಮಗ್ರ ಪಾಲುದಾರಿಕೆಯನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.
ಸಮಕಾಲೀನ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಪ್ರತಿಬಿಂಬಿಸಲು ಮತ್ತು ಪ್ರಾತಿನಿಧ್ಯವನ್ನು ಹೆಚ್ಚಿಸಲು ವಿಶ್ವಸಂಸ್ಥೆ ಮತ್ತು ಅದರ ಭದ್ರತಾ ಮಂಡಳಿ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳಲ್ಲಿ ಸಮಗ್ರ ಸುಧಾರಣೆಯ ಅಗತ್ಯತೆಯನ್ನು ಉಭಯನಾಯಕರು ಒತ್ತಿ ಹೇಳಿದರು.
ಕಾಯಂ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ಸ್ಲೊವಾಕಿಯಾ ನೀಡುತ್ತಿರುವ ಬೆಂಬಲವನ್ನು ಮೋದಿ ಶ್ಲಾಘಿಸಿದರು.
1993ರಲ್ಲಿ ಸ್ಲೊವಾಕಿಯಾ ಸ್ವತಂತ್ರಗೊಂಡ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಅಲ್ಲಿಗೆ ಭೇಟಿ ನೀಡಿದ್ದು ಇದೇ ಮೊದಲು.

