HEALTH TIPS

ಕಾಶ್ಮೀರಕ್ಕೆ ಹೋಗಿ ಪಕ್ಷದ ನಾಯಕರನ್ನು ಭೇಟಿಯಾಗದೆ ವಾಪಸ್ಸಾದ ಶಶಿ ತರೂರ್; ಕಾಂಗ್ರೆಸ್‌ ಅಸಮಾಧಾನ

 ಶ್ರೀನಗರ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಕಾಶ್ಮೀರ ಭೇಟಿ ಪಕ್ಷದೊಳಗಿನ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾದ ತರೂರ್, ಅಲ್ಲಿನ ಕಾಂಗ್ರೆಸ್ ನಾಯಕರು ಹಾಗೂ ಸಾರ್ವಜನಿಕರನ್ನು ಭೇಟಿಯಾಗದಿರುವುದಕ್ಕೆ ಕಾಂಗ್ರೆಸ್‌ನ ಜಮ್ಮು ಮತ್ತು ಕಾಶ್ಮೀರ ಘಟಕ ಅಸಮಾಧಾನ ವ್ಯಕ್ತಪಡಿಸಿದೆ. 


ನಳಂದ ಸಂವಾದ ಕಾರ್ಯಕ್ರಮದ ಅಂಗವಾಗಿ ಶ್ರೀನಗರಕ್ಕೆ ಭೇಟಿ ನೀಡಿದ್ದ ತರೂರ್, ಎಲ್‌ಜಿ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಜಮ್ಮು ಮತ್ತು ಕಾಶ್ಮೀರ 'ಸಾಮಾನ್ಯ ಸ್ಥಿತಿ'ಯತ್ತ ಸಾಗುತ್ತಿರುವ ಕುರಿತು ಪ್ರಗತಿ ಕಂಡುಬಂದಿದೆ ಎಂದು ಹೇಳಿದ್ದಾರೆ.

''ನಾನು ಅಲ್ಲಿಗೆ ತಲುಪಿದಾಗ ಎಲ್‌ಜಿ ಅವರು ಕಾಶ್ಮೀರಿ ಲೇಖಕರ ಸಂಘ ಹಾಗೂ ಮಹಿಳಾ ಸಂಘಟನೆಯ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಇದು ಸ್ವಾಗತಾರ್ಹ ಬೆಳವಣಿಗೆ. ಇನ್ನೂ ಹಲವು ಸವಾಲುಗಳು ಉಳಿದಿವೆ ಮತ್ತು ಇನ್ನೂ ಹೆಚ್ಚಿನ ಕೆಲಸ ಆಗಬೇಕಿದೆ. ಆದರೆ ನಾನು ಸಭೆಯಿಂದ ಹೊರಬರುವಾಗ ಬಹಳ ದಿನಗಳ ಬಳಿಕ ಹೆಚ್ಚು ಸಕಾರಾತ್ಮಕ ಭಾವನೆಯಲ್ಲಿದ್ದೆ'' ಎಂದು ತರೂರ್ ಬರೆದಿದ್ದಾರೆ.

ಆದರೆ, ತರೂರ್ ಅವರ ಭೇಟಿ ಕಾಂಗ್ರೆಸ್‌ನ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ (ಎಏPಅಅ) ಅಸಮಾಧಾನಕ್ಕೆ ಕಾರಣವಾಗಿದೆ. ''ತಳಮಟ್ಟದ ವಾಸ್ತವ ಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಕಾಶ್ಮೀರದ ಜನರನ್ನು ನೀವು ಭೇಟಿಯಾಗುತ್ತೀರಿ ಎಂದು ನಿರೀಕ್ಷಿಸಲಾಗಿತ್ತು. ಏಳು ವರ್ಷಗಳ ಹಿಂದೆ ನಮ್ಮಿಂದ ಕಸಿದುಕೊಳ್ಳಲಾದ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ ನಮ್ಮ ಪಕ್ಷದ ಸದಸ್ಯರನ್ನು ಭೇಟಿಯಾಗಲು ಸ್ವಲ್ಪ ಸಮಯವನ್ನಾದರೂ ಮೀಸಲಿಡಬಹುದಿತ್ತು'' ಎಂದು ಎಏPಅಅ ವಕ್ತಾರ ರವೀಂದರ್ ಶರ್ಮಾ, ತರೂರ್ ಅವರ ಪೋಸ್ಟ್‌ ಗೆ ಪ್ರತಿಕ್ರಿಯೆಯಾಗಿ ಹೇಳಿದ್ದಾರೆ.

ಮೋದಿ ಹೇಳಿಕೆ ವಿಚಾರಕ್ಕೂ ಭಿನ್ನಾಭಿಪ್ರಾಯ

ತರೂರ್ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯಕ್ಕೆ ಇದು ಹೊಸ ಸೇರ್ಪಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಾತುಕತೆ ಕುರಿತು ತರೂರ್ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೂ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

''ಪ್ರಧಾನಿ ಮೋದಿ ಅವರು ಅಧ್ಯಕ್ಷರೊಂದಿಗಿನ ಸಾರ್ವಜನಿಕ ಹಾಗೂ ಖಾಸಗಿ ಸಭೆಗಳಲ್ಲಿ ಭಾರತದ ನಿಲುವನ್ನು ಸ್ಪಷ್ಟವಾಗಿ ಮಂಡಿಸಿದ್ದಾರೆ'' ಎಂದು ತರೂರ್ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕರು, ತರೂರ್ ಅವರು ಪ್ರಧಾನಿ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿರುವಂತೆ ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ತರೂರ್, ಭಾರತೀಯ ನಾಗರಿಕ ನಾವಿಕರ ಸುರಕ್ಷತೆ ಕುರಿತ ಹೇಳಿಕೆಗೆ ಪಕ್ಷಪಾತದ ಬಣ್ಣ ನೀಡಿರುವುದು ಅಚ್ಚರಿಯ ಸಂಗತಿ ಎಂದು ಹೇಳಿದ್ದಾರೆ.

''ಯುದ್ಧದ ಸಂದರ್ಭದಲ್ಲಿ ಭಾರತೀಯ ನಾವಿಕರು ಮತ್ತು ವಾಣಿಜ್ಯ ಚಟುವಟಿಕೆಗಳ ಸುರಕ್ಷತೆ ಕುರಿತು ಸಂದೇಶ ನೀಡುವುದು ಮುಖ್ಯ. ನೌಕೆಗಳು ಯುದ್ಧದ ಗುರಿಯಾಗಬಾರದು. ಅವರು ಸೈನಿಕರಲ್ಲ. ಇದೇ ಪ್ರಧಾನಿ ಮೋದಿ ನೀಡಿದ ಸಂದೇಶ'' ಎಂದು ಅವರು ಹೇಳಿದ್ದಾರೆ.

ಪವನ್ ಖೇರಾ ಪ್ರತಿಕ್ರಿಯೆ

ಈ ಕುರಿತು ಪ್ರಶ್ನಿಸಿದಾಗ ಕಾಂಗ್ರೆಸ್‌ ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ತರೂರ್ ಅವರ ಹೇಳಿಕೆಯನ್ನು ತಾವು ಗಮನಿಸಿಲ್ಲ ಎಂದು ಹೇಳಿದರು. ಆದರೆ ಭಾರತ-ಅಮೆರಿಕ ಜಂಟಿ ಹೇಳಿಕೆಯಲ್ಲಿ ಒಮಾನ್ ಕೊಲ್ಲಿಯಲ್ಲಿ ಮೂವರು ಭಾರತೀಯ ನಾವಿಕರ ಸಾವಿನ ಪ್ರಕರಣ, ಆಪರೇಷನ್ ಸಿಂಧೂರ್ ಕುರಿತು ಡೊನಾಲ್ಡ್ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳು ಹಾಗೂ ಇರಾನಿನ ಯುದ್ಧನೌಕೆ 'ಐರಿಸ್ ದೇನಾ' ಮೇಲಿನ ದಾಳಿಯ ಉಲ್ಲೇಖಗಳು ಕಾಣಿಸುತ್ತಿಲ್ಲ ಎಂದು ಹೇಳಿದರು.

ಖೇರಾ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ತರೂರ್, ಮೋದಿ-ಟ್ರಂಪ್ ಮಾತುಕತೆಯಲ್ಲಿ ಭಾರತೀಯ ನಾವಿಕರ ಸುರಕ್ಷತೆಯ ವಿಷಯ ಪ್ರಸ್ತಾಪವಾಗಿತ್ತು ಎಂದು ವರದಿಯಾಗಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಗೂಗಲ್‌ ನ ಕೃತಕ ಬುದ್ಧಿಮತ್ತೆ ಸಾಧನ 'ಜೆಮಿನಿ' ನೀಡಿದ ಸಾರಾಂಶವನ್ನೂ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಒಮಾನ್ ಕೊಲ್ಲಿಯಲ್ಲಿ ಅಮೆರಿಕದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆ ಪ್ರಸ್ತಾಪವಾಗಿತ್ತು ಎಂದು ಉಲ್ಲೇಖಿಸಲಾಗಿದೆ.

''ನಾನು ವ್ಯಾಪಕವಾಗಿ ಓದುತ್ತೇನೆ ಮತ್ತು ಓದಿದ್ದನ್ನು ನೆನಪಿಟ್ಟುಕೊಳ್ಳುತ್ತೇನೆ. ಸತ್ಯಾಂಶಗಳನ್ನು ತಪ್ಪಾಗಿ ನಿರೂಪಿಸಿದ ಅಥವಾ ತಿರುಚಿದ ಆರೋಪ ನನ್ನ ಮೇಲೆ ಎಂದಿಗೂ ಬಂದಿಲ್ಲ. ಪ್ರಧಾನಿಯು ಟ್ರಂಪ್ ಅವರ ಪಕ್ಕದಲ್ಲಿ ಕುಳಿತಿದ್ದಾಗ ನಡೆದ ಮಾತುಕತೆಗಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಸಾರಾಂಶಕ್ಕೆ ನಾನು ಬದ್ಧನಾಗಿದ್ದೇನೆ'' ಎಂದು ತರೂರ್ ಹೇಳಿದ್ದಾರೆ.

ಅಮೆರಿಕ-ಇರಾನ್ ಸಂಘರ್ಷದಲ್ಲಿ ಭಾರತೀಯರು ಜೀವ ಕಳೆದುಕೊಳ್ಳುತ್ತಿರುವ ಕುರಿತು ಕಳವಳ ವ್ಯಕ್ತಪಡಿಸುವ ಬದಲು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ನಾಯಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ತರೂರ್ ಆರೋಪಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries