HEALTH TIPS

ಎಚ್​ಎಎಲ್​ಗೆಯೇ ಚಳ್ಳೆಹಣ್ಣು ತಿನಿಸಲು ಯತ್ನಿಸಿದ ಹೈದರಾಬಾದ್ ಕಂಪನಿ; ತೇಜಸ್ ಯುದ್ಧವಿಮಾನದ ಬಿಡಿಭಾಗ ಪೂರೈಕೆಯಲ್ಲಿ ವಂಚನೆ; ದೂರು ದಾಖಲು

ಬೆಂಗಳೂರು: ಭಾರತದ ಲಘು ಯುದ್ಧ ವಿಮಾನ ‘ತೇಜಸ್ ಮಾರ್ಕ್-1ಎ’ ಯೋಜನೆಗೆ ಬಿಡಿಭಾಗಗಳನ್ನು ಪೂರೈಸುವ ಹೈದರಾಬಾದ್ ಮೂಲದ ‘ಟೆಕ್ ಏರೋ ಡಿವೈಸಸ್’ (Tec Aero Devices) ಕಂಪನಿಯು ನಕಲಿ ಗುಣಮಟ್ಟದ ವರದಿಗಳನ್ನು ನೀಡಿದೆ ಎಂದು ಆರೋಪಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಬೆಂಗಳೂರಿನಲ್ಲಿ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ (Cheating and Forgery) ಮೊಕದ್ದಮೆ ಹೂಡಿದೆ.

ಹೆಚ್‌ಎಎಲ್‌ನ ಏರ್‌ಕ್ರಾಫ್ಟ್ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಣು ಗುಪ್ತಾ ಅವರು ನೀಡಿದ ದೂರಿನ ಆಧಾರದ ಮೇಲೆ, ಟೆಕ್ ಏರೋ ಡಿವೈಸಸ್ ಕಂಪನಿಯ ಸಿಇಒ ಎಂ. ಶಿವರಾಮ ಪ್ರಸಾದ್ ವಿರುದ್ಧ ಬೆಂಗಳೂರಿನ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಕಂಪನಿಯು ಒಟ್ಟು 172 ಬಿಡಿಭಾಗಗಳಿಗೆ ಸಂಬಂಧಿಸಿದಂತೆ 199 ನಕಲಿ ಲ್ಯಾಬ್ ಟೆಸ್ಟ್ ವರದಿಗಳನ್ನು ಸೃಷ್ಟಿಸಿ ಸಲ್ಲಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಂಧ್ರ ಕಂಪನಿಯ ಕಳ್ಳಾಟ ಪತ್ತೆಯಾಗಿದ್ದು ಹೇಗೆ?

ಹೆಚ್‌ಎಎಲ್ ಕಂಪನಿಯು ಮಾರ್ಚ್ 2022 ರಿಂದ ಸೆಪ್ಟೆಂಬರ್ 2023 ರ ನಡುವೆ ಈ ಕಂಪನಿಗೆ 18 ಪರ್ಚೇಸ್ ಆರ್ಡ್​ಗಳನ್ನು (Purchase Orders) ನೀಡಿತ್ತು. ವಿಮಾನದ ಬಿಡಿಭಾಗಗಳ ಭದ್ರತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅದರ ಸಾಮರ್ಥ್ಯ, ಗಡಸುತನ (Hardness), ಮತ್ತು ತುಕ್ಕು ನಿರೋಧಕ ಶಕ್ತಿಯ ಮೂಲ ವರದಿಗಳನ್ನು ಹೆಚ್‌ಎಎಲ್ ಕೇಳಿತ್ತು. ಆದರೆ ಸರಬರಾಜುದಾರರು ಅಸಲಿ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ.

ಅನುಮಾನಗೊಂಡ ಹೆಚ್‌ಎಎಲ್ ಅಧಿಕಾರಿಗಳು, ಟೆಕ್ ಏರೋ ಡಿವೈಸಸ್ ಹೆಸರಿಸಿದ ಹೈದರಾಬಾದ್‌ನ ‘ಆಕ್ಸಿಸ್ ಇನ್ಸ್‌ಪೆಕ್ಷನ್ ಸೊಲ್ಯೂಷನ್ಸ್’ ಎಂಬ ಟೆಸ್ಟಿಂಗ್ ಏಜೆನ್ಸಿಯಲ್ಲಿ ನವೆಂಬರ್ 2023 ರಲ್ಲಿ ಆಡಿಟ್ ನಡೆಸಿದ್ದಾರೆ. ಆಗ ಆಕ್ಸಿಸ್ ಸಂಸ್ಥೆಯು, “ನಾವು ಈ ಯಾವುದೇ ವರದಿಗಳನ್ನು ನೀಡಿಲ್ಲ, ನಮ್ಮ ಹೆಸರು ಮತ್ತು ಸಹಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ರಿಪೋರ್ಟ್ ತಯಾರಿಸಲಾಗಿದೆ” ಎಂದು ಲಿಖಿತವಾಗಿ ಸ್ಪಷ್ಟಪಡಿಸಿದೆ.

ತಪ್ಪು ಒಪ್ಪಿಕೊಂಡ ಕಂಪನಿ

ಹೆಚ್‌ಎಎಲ್ ತನಿಖೆ ತೀವ್ರಗೊಳಿಸಿದಾಗ, ಟೆಕ್ ಏರೋ ಡಿವೈಸಸ್‌ನ ಪ್ರತಿನಿಧಿಗಳು ನವೆಂಬರ್ 22, 2023 ರಂದು ಹೆಚ್‌ಎಎಲ್‌ಗೆ ಕ್ಷಮಾಪಣಾ ಪತ್ರ ನೀಡಿದ್ದರು. ಅದರಲ್ಲಿ ತಮ್ಮ ಉದ್ಯೋಗಿಯೊಬ್ಬರು ಮಾಡಿದ ತಪ್ಪಿನಿಂದಾಗಿ ನಕಲಿ ವರದಿಗಳನ್ನು ಸಬ್ಮಿಟ್ ಮಾಡಲಾಗಿತ್ತು ಎಂದು ಒಪ್ಪಿಕೊಂಡು, ಕ್ಷಮಿಸುವಂತೆ ಕೋರಿದ್ದರು.

ಹೆಚ್‌ಎಎಲ್ ತೆಗೆದುಕೊಂಡ ಕಠಿಣ ಕ್ರಮಗಳು

  • ನಕಲಿ ವರದಿಗಳು ಸಾಬೀತಾದ ತಕ್ಷಣ ಹೆಚ್‌ಎಎಲ್ ಈ ಕಂಪನಿಯನ್ನು ತನ್ನ ಅನುಮೋದಿತ ಪೂರೈಕೆದಾರರ ಪಟ್ಟಿಯಿಂದ ತೆಗೆದುಹಾಕಿದೆ ಮತ್ತು ಮಾರ್ಚ್ 10, 2027 ರವರೆಗೆ (3 ವರ್ಷಗಳ ಕಾಲ) ವ್ಯವಹಾರ ನಡೆಸದಂತೆ ನಿಷೇಧಿಸಿದೆ.
  • ಈ ಬಿಡಿಭಾಗಗಳಿಗೆ ಸಂಬಂಧಿಸಿದಂತೆ ಹೆಚ್‌ಎಎಲ್ ಇದುವರೆಗೆ ಯಾವುದೇ ಹಣವನ್ನು (Payments) ಆ ಕಂಪನಿಗೆ ಪಾವತಿಸಿಲ್ಲ.
  • ಆಂತರಿಕ ಸಮಾಲೋಚನೆಗಳ ನಂತರ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ ಕಂಪನಿ ಮತ್ತು ಅದರ ಸಿಇಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
  • ಭಾರತದ ಮಿಲಿಟರಿ ಶಕ್ತಿಗೆ ಸಂಬಂಧಿಸಿದ ಘಟನೆ ಇದು…

    ‘ತೇಜಸ್ ಮಾರ್ಕ್-1ಎ’ ಭಾರತೀಯ ವಾಯುಪಡೆಯ ಅತ್ಯಂತ ಮಹತ್ವದ ದೇಶೀಯ ಯುದ್ಧ ವಿಮಾನ ಯೋಜನೆಯಾಗಿದೆ. ವಿಮಾನದ ಸುರಕ್ಷತೆಯಲ್ಲಿ ಬಿಡಿಭಾಗಗಳ ಗುಣಮಟ್ಟ ಅತ್ಯಂತ ಪ್ರಮುಖ ಪಾತ್ರ ವಹಿಸುವುದರಿಂದ ಈ ವಂಚನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸದ್ಯಕ್ಕೆ ಯಾವುದೇ ವಿಮಾನದ ಸುರಕ್ಷತೆಗೆ ಧಕ್ಕೆಯಾಗಿಲ್ಲ ಮತ್ತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕುತೂಹಲದ ಸಂಗತಿ ಎಂದರೆ, ಇದೇ ಹೈದರಾಬಾದ್ ಕಂಪನಿಯು ಈ ಮೊದಲು ದೊಡ್ಡ ದೊಡ್ಡ ಕಂಪನಿಗಳಿಗೆ ಇನ್ನೂ ದೊಡ್ಡ ದೊಡ್ಡ ಬಿಡಿಭಾಗಗಳನ್ನು ಪೂರೈಸಿದೆಯಂತೆ. ಅವುಗಳಲ್ಲಿಯೂ ಅದು ಗೋಲ್ಮಾಲ್ ನಡೆಸಿದ್ದಾರಾ ಇಲ್ಲವಾ ಎಂಬುದು ಗೊತ್ತಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries