ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆ ಚಿತ್ರಗಳಲ್ಲಿ ಟ್ರಂಪ್ ಅವರ ಬಳಿ ಉದ್ದನೆಯ ಬಿಳಿ ಬಣ್ಣದ ಕೂದಲು ಹೊಂದಿರುವ, ಒಂದೇ ರೀತಿಯ ಕೆಂಪು ಮಿಲಿಟರಿ ಶೈಲಿಯ ಉಡುಪು ಧರಿಸಿರುವ ಮೂವರ ಜೊತೆ ನಿಂತಿರುವುದು ಕಂಡುಬಂದಿದೆ.
ಈ ಫೋಟೊಗಳು ಎಲ್ಲೆಡೆ ಹರಿದಾಡುತ್ತಿದ್ದಂತೆ ನೆಟ್ಟಿಗರು ಇವರು ಭೂಮಿಯ ಮೇಲಿನ ಜೀವಿಗಳಲ್ಲ, ಬಾಹ್ಯಾಕಾಶದ ನಾರ್ಡಿಕ್ ಏಲಿಯನ್ಗಳು ಎಂದು ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಲಾರಂಭಿಸಿದ್ದಾರೆ.
ಪತ್ರಕರ್ತ ಜಾನ್ ಸ್ಟೀವರ್ಟ್ ಅವರು, 'ಈ ಚಿತ್ರಗಳನ್ನು ಮೊದಲು ಶ್ವೇತಭವನದ ಅಧಿಕೃತ ತಾಣದಲ್ಲಿ ಪೋಸ್ಟ್ ಮಾಡಿ, ತಕ್ಷಣವೇ ಡಿಲೀಟ್ ಮಾಡಲಾಗಿದೆ' ಎಂದು ಹೇಳಿಕೆ ನೀಡಿದ್ದು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನು ಕೆಲವರು, ಇವು ಎಐ ಬಳಸಿ ಸೃಷ್ಟಿಸಲಾದ ನಕಲಿ ಚಿತ್ರಗಳು. ಇದನ್ನು ನಿಜವಾದ ಏಲಿಯನ್ ಕಥೆಯಾಗಿ ಬದಲಾಯಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಕೆಲವು ಬಳಕೆದಾರರು ಈ ಚಿತ್ರಗಳ ಪರವಾಗಿ ವಾದಿಸಿದ್ದು, ಇವರು ಏಲಿಯನ್ಗಳಲ್ಲ ಬದಲಿಗೆ ಹಳೆಯ ಕಾಲದ ನಾರ್ವೆ ರಾಜಮನೆತನದ ಅಂಗರಕ್ಷಕರು ಎಂದು ಹೇಳಿದ್ದಾರೆ.
ಈ ಹಿಂದೆಯೂ ಜೋ ಬೈಡನ್, ಬಿಲ್ ಗೇಟ್ಸ್ ಮತ್ತು ಟ್ರಂಪ್ ಅವರನ್ನೇ ಗುರಿಯಾಗಿಸಿ 'ರೆಪ್ಟಿಲಿಯನ್' ಸಿದ್ಧಾಂತಗಳನ್ನು ಸೃಷ್ಟಿಸಲಾಗಿತ್ತು. ಇವರೆಲ್ಲರೂ ಸಮಾಜದ ಕಣ್ಣಿಗೆ ಮನುಷ್ಯರಂತೆ ಕಾಣುವ ರಹಸ್ಯ ಜೀವಿಗಳು ಎಂಬ ಕಟ್ಟುಕಥೆಗಳು ವರ್ಷಗಳಿಂದ ಹರಿದಾಡುತ್ತಿವೆ.

