ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ಜುಲೈ 20ರಂದು ನಡೆದ 'ಸಂಸತ್ ಚಲೊ' ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಸುಮಾರು ಸಾವಿರ ಮಂದಿ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆ ಹೊಂದಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
'ಸಂಸತ್ ಚಲೊ'ಗೆ ಸಂಬಂಧಿಸಿದಂತೆ 2,873 ವ್ಯಕ್ತಿಗಳನ್ನು ಪರಿಶೀಲಿಸಿರುವ ಪೊಲೀಸರು 989 ಮಂದಿ ಅಪರಾಧದ ಹಿನ್ನೆಲೆ ಹೊಂದಿದ್ದಾರೆ ಎಂದು ಗುರುತಿಸಿದ್ದಾರೆ ಎಂದು 'ದಿ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಮುಖ ಚಹರೆ ಗುರುತಿಸುವಿಕೆ (Facial Recognition) ತಂತ್ರಜ್ಞಾನ, ಸಿಸಿಟಿವಿ ದೃಶ್ಯಗಳು, ಡ್ರೋನ್ ಕ್ಯಾಮೆರಾ ವಿಡಿಯೊಗಳು, ಅಧಿಕಾರಿಗಳು ಹಾಗೂ ಸ್ಥಳದಲ್ಲಿದ್ದವರು ಚಿತ್ರೀಕರಿಸಿದ್ದ ವಿಡಿಯೊಗಳನ್ನು ಪೊಲೀಸರು ಬಳಸಿಕೊಂಡಿದ್ದಾರೆ.
ಗುರುತಿಸಲಾಗಿರುವ 989 ಮಂದಿಯಲ್ಲಿ, 101 ಜನರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, 61 ಮಂದಿಯ ವಿರುದ್ಧ ಅತ್ಯಾಚಾರ ಆರೋಪಗಳಿವೆ. 284 ಜನರ ಮೇಲೆ ದರೋಡೆ ಪ್ರಕರಣ, 62 ಮಂದಿ ವಿರುದ್ಧ ಕೊಲೆಗೆ ಯತ್ನಿಸಿದ ಆರೋಪಗಳಿವೆ. ಶಸ್ತ್ರಾಸ್ತ್ರ ಬಳಕೆ ಕಾಯ್ದೆಯಡಿ 229 ಜನರ ವಿರುದ್ಧ ಪ್ರಕರಣ ದಾಖಲಾಗಿವೆ. ಉಳಿದ ಆರು ಮಂದಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ (ಪೋಕ್ಸೊ) ಪ್ರಕರಣ ಎದುರಿಸುತ್ತಿದ್ದಾರೆ ಎನ್ನಲಾಗಿದೆ.
'ನೀಟ್' ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೇಶದ ವಿವಿಧೆಡೆ ಈಚೆಗೆ ಪ್ರತಿಭಟನೆಗಳು ನಡೆದಿದ್ದವು. ಜಂತರ್ ಮಂತರ್‌ನಲ್ಲಿ ಜೂನ್ 20ರಿಂದ ಪ್ರತಿಭಟನೆ ನಡೆಸಿದ್ದ ಸಿಜೆಪಿ, ಜುಲೈ 20ರಂದು ಸಂಸತ್ ಚಲೊಗೆ ಕರೆ ನೀಡಿತ್ತು. ಅಂದು ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಶೆಲ್ ಬಳಸಿದ್ದರು. ಪೆಲೆಟ್ ಗನ್ ಬಳಿಸಿದ ಆರೋಪಗಳೂ ಕೇಳಿ ಬಂದಿವೆ. ಪೊಲೀಸರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

