ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ಆರಂಭವಾಗಿದ್ದು, ಒಮಾನ್ ಕರಾವಳಿಯಲ್ಲಿದ್ದ ಹಡಗಿನ ಮೇಲೂ ದಾಳಿಯಾಗಿದೆ. ಅದರಲ್ಲಿದ್ದ 11 ಭಾರತೀಯರಲ್ಲಿ 10 ಜನರನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾನೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿದೆ.
ಭಾನುವಾರ(ಜುಲೈ 12) ಒಮಾನ್ ಕರಾವಳಿಯಲ್ಲಿದ್ದ ಜಿಎಫ್ಎಸ್ ಗ್ಯಾಲಕ್ಸಿ ಹೆಸರಿನ ವಾಣಿಜ್ಯ ಹಡಗಿನ ಮೇಲೆ ದಾಳಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
'ಇದು ತೀವ್ರ ಕಳವಳಕಾರಿಯಾದ ಘಟನೆಯಾಗಿದೆ. ಈ ಭಾಗದಲ್ಲಿ ವಾಣಿಜ್ಯ ಹಡಗುಗಳು ಮತ್ತು ನಾಗರಿಕ ಮೂಲಭೂತ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದನ್ನು ನಿಲ್ಲಿಸಬೇಕು' ಎಂದು ಆಗ್ರಹಿಸಿದೆ.
ಜಿಎಫ್ಎಸ್ ಗ್ಯಾಲಕ್ಸಿ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದ್ದು, ಅದರ ಇಂಜಿನ್ ಕೊಠಡಿಗೆ ಹಾನಿಯಾಗಿದೆ. ಘಟನೆಯ ವೇಳೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅಮೆರಿಕ ಸೇನೆ ತಿಳಿಸಿದೆ.
ಒಮಾನ್ ಕಡಲ ತೀರದಿಂದ 17 ಕಿ.ಮೀ ದೂರದಲ್ಲಿ ಘಟನೆ ನಡೆದಿದ್ದು, ತಕ್ಷಣವೇ ಅದರಲ್ಲಿದ್ದ ಸಿಬ್ಬಂದಿಯು ಅಲ್ಲಿಂದ ಪಾರಾಗಿದ್ದಾರೆ ಎಂದು ಬ್ರಿಟನ್ ಮೂಲದ ಕಡಲ ಸಂಸ್ಥೆ ಯುಕೆಎಂಟಿಒ ಹೇಳಿದೆ.
ಅಮೆರಿಕ ದಾಳಿ ಆರಂಭಿಸಿದ ಬೆನ್ನಲ್ಲೇ, ಭಾನುವಾರದಿಂದ ಹೊರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಘೋಷಿಸಿತ್ತು. ಅದರ ನಂತರ, ಕೊಲ್ಲಿ ರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುತ್ತಿದೆ.
ಟ್ರಂಪ್ ಹತ್ಯೆಗೆ ಇರಾನ್ ಸಂಚು ರೂಪಿಸಿದೆ ಎನ್ನುವ ವರದಿಯ ಬೆನ್ನಲ್ಲೇ, 'ಸಾವಿರ ಕ್ಷಿಪಣಿಗಳು ಇರಾನ್ನತ್ತ ಗುರಿ ಇಟ್ಟಿವೆ. ನನ್ನ ಹತ್ಯೆಗೆ ಪ್ರಯತ್ನ ಮಾಡಿದರೆ ಇರಾನ್ ಸರ್ವನಾಶವಾಗುತ್ತದೆʼ ಎಂದು ಎಚ್ಚರಿಸಿದ್ದರು. 'ಏಕ ಪಕ್ಷೀಯ ಒಪ್ಪಂದಗಳ ಯುಗ ಮುಗಿದಿದೆ. ನಾವು ಈಗಾಗಲೇ ತಿಳಿಸಿದ್ದೇವೆ. ನಿಮ್ಮ ಮಾತನ್ನು ಉಳಿಸಿಕೊಳ್ಳಿ, ಇಲ್ಲವೇ ತಕ್ಕ ಬೆಲೆ ತೆರುತ್ತೀರಿ. ವಾಸ್ತವ ಕಠೋರವಾಗಿರುತ್ತದೆʼ ಎಂದು ಇರಾನ್ ಹೇಳಿತ್ತು. ಇದರಿಂದಾಗಿ ಮತ್ತೆ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.

