ನವದೆಹಲಿ: ಇ-20 ಪೆಟ್ರೋಲ್‌ನ ಬಳಕೆಯಿಂದಾಗಿ ವಾಹನಗಳ ಇಂಧನ ದಕ್ಷತೆಯು (ಮೈಲೇಜ್) ಶೇಕಡ 2ರಿಂದ ಶೇ 6ರವರೆಗೆ ಕಡಿಮೆ ಆಗಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಗೆ ಗುರುವಾರ ತಿಳಿಸಿದ್ದಾರೆ.
ಇಂಧನ ದಕ್ಷತೆ ತಗ್ಗುವ ಪ್ರಮಾಣವು ವಾಹನವು ಯಾವ ಮಾದರಿಗೆ ಸೇರಿದೆ, ಅದು ಎಷ್ಟು ಹಳೆಯದಾಗಿದೆ ಎಂಬುದನ್ನು ಆಧರಿಸಿದೆ ಎಂದು ಅವರು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.
ಎಂಜಿನ್‌ನ ಬಾಳಿಕೆಯ ಕುರಿತಾಗಿಯೂ ಪರೀಕ್ಷೆಗಳನ್ನು ನಡೆಸಲಾಗಿದೆ, ಇ-20 ಪೆಟ್ರೋಲ್‌ನಿಂದಾಗಿ ವೈಫಲ್ಯ ಆಗಿರುವುದು ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಇ-20 ಇಂಧನದಿಂದಾಗಿ ವಾಹನದ ವೇಗೋತ್ಕರ್ಷ ಉತ್ತಮ ಆಗುತ್ತದೆ, ಚಾಲನಾ ಅನುಭವ ಉತ್ತಮವಾಗಿರುತ್ತದೆ, ಇ-10 ಪೆಟ್ರೋಲ್‌ಗೆ ಹೋಲಿಸಿದರೆ ಇದರಲ್ಲಿ ಇಂಗಾಲದ ಡೈ-ಆಕ್ಸೈಡ್ ಉಗುಳುವಿಕೆಯು ಅಂದಾಜು ಶೇ 30ರಷ್ಟು ಕಡಿಮೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.

