ವಾಷಿಂಗ್ಟನ್ (PTI): ಎಚ್-1 ಬಿ ವೀಸಾ ನೀಡುವುದನ್ನು ಮೂರು ವರ್ಷ ಸ್ಥಗಿತಗೊಳಿಸುವುದು ಮತ್ತು ಇದಕ್ಕಾಗಿ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸುವುದನ್ನು ಕಾನೂನು ಬದ್ಧಗೊಳಿಸುವ ಅವಕಾಶ ಒಳಗೊಂಡ ಮಸೂದೆಯೊಂದನ್ನು ಅಮೆರಿಕ ಸಂಸತ್‌ನ ಮೇಲ್ಮನೆಯಲ್ಲಿ (ಸೆನೆಟ್) ಮಂಡಿಸಲಾಗಿದೆ.
'ಅಮೆರಿಕದ ಉದ್ಯೋಗಿಗಳ ಹಕ್ಕುಗಳನ್ನು ಸುಲಭವಾಗಿ ಹತ್ತಿಕ್ಕುವ ವೀಸಾ ನೀಡಬಾರದು' ಎಂದು, ಮಸೂದೆಯನ್ನು ಮಂಡಿಸಿರುವ ರಿಪಬ್ಲಿಕನ್ ಪಕ್ಷದ ಸೆನೆಟರ್ ಟಿಮ್ ಶೀಹಿ ಹೇಳಿದ್ದಾರೆ.
'ಅಧಿಕ ಕೌಶಲದ ಅಗತ್ಯವಿರುವ ಹಾಗೂ ಭರ್ತಿ ಮಾಡಲು ಕಷ್ಟಕರವಾದ ಹುದ್ದೆಗಳಿಗೆ ಉದ್ಯೋಗಿಗಳ ಕೊರತೆಯನ್ನು ನೀಗಿಸಲು ಎಚ್-1ಬಿ ವೀಸಾ ಸೌಲಭ್ಯ ಜಾರಿಗೊಳಿಸಲಾ ಗಿದೆಯೇ ಹೊರತು ಅರ್ಹ, ಶ್ರಮಜೀವಿ ಅಮೆರಿಕನ್ನರ ಬದಲು ಕಡಿಮೆ ವೇತನ ನೀಡಿ ವಿದೇಶಿಯರನ್ನು ನೇಮಕ ಮಾಡಿಕೊಳ್ಳಲು ಅಲ್ಲ' ಎಂದು ಅವರು ಹೇಳಿದ್ದಾರೆ.
ಎಚ್-1ಬಿ ವೀಸಾ ಸೌಲಭ್ಯದ ಮೂಲಕ ಅಮೆರಿಕದ ತಂತ್ರಜ್ಞಾನ ಕಂಪನಿಗಳು ಭಾರತ ಮತ್ತು ಚೀನಾದಂತಹ ರಾಷ್ಟ್ರಗಳಿಂದ ಪ್ರತಿವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿವೆ.

