ಗಾಜಾ: ಅನಾರೋಗ್ಯ ಕಾಣಿಸಿಕೊಂಡಾಗ ವಾಹನಗಳನ್ನೇರಿ ಆಸ್ಪತ್ರೆಯತ್ತ ಧಾವಿಸುವುದು ಸಾಮಾನ್ಯ ಸಂಗತಿ. ಅಭಿವೃದ್ದಿಶೀಲ ರಾಷ್ಟ್ರಗಳಲ್ಲೂ ಈ ಸೌಕರ್ಯಕ್ಕೆ ಕೊರತೆಯಿಲ್ಲ. ಆದರೆ ಯುದ್ಧಪೀಡಿತ ಗಾಜಾದಲ್ಲಿ ಪರಿಸ್ಥಿತಿ ಹೀಗಿಲ್ಲ.
ಅಸ್ವಸ್ಥರಾಗಿರುವವರನ್ನು ಕತ್ತೆಗಾಡಿಯಲ್ಲಿ ಕೂರಿಸಿಕೊಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ದುಃಸ್ಥಿತಿ ಗಾಜಾದ್ದು.
ರೋಗ ಪೀಡಿತರು, ಅಸ್ವಸ್ಥರಾಗಿರುವವರು ಕತ್ತೆಗಾಡಿಯ ಮೂಲಕ ಆರೋಗ್ಯ ಕೇಂದ್ರಗಳಿಗೆ ಹೋಗಲು ಹೆಣಗಾಡುತ್ತಿರುವ ದೃಶ್ಯಗಳು ಮಾನವೀಯ ಬಿಕ್ಕಟ್ಟಿನ ಸಾಕ್ಷಿಯಾಗಿದೆ.
ಗಾಜಾದ ಆರೋಗ್ಯ ರಕ್ಷಣಾ ವ್ಯವಸ್ಥೆಯು ಬಹಳ ದುರ್ಬಲವಾಗಿದ್ದು, ಅರ್ಧಕ್ಕಿಂತ ಹೆಚ್ಚು ಆಸ್ಪತ್ರೆಗಳು ಸೀಮಿತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ.
2023ರಲ್ಲಿ ಹಮಾಸ್-ಇಸ್ರೇಲ್ ನಡುವೆ ಸಂಘರ್ಷ ಆರಂಭವಾಗಿತ್ತು. 2025ರ ಅಕ್ಟೋಬರ್‌ನಲ್ಲಿ ಯುದ್ಧಕ್ಕೆ ಕದನ ವಿರಾಮ ಘೋಷಿಸಲಾಗಿದೆ.
ಆದರೆ ದಾಳಿ ಸಮಯದಲ್ಲಿ ಗಾಜಾ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದು, ಅಲ್ಲಿನ ಜನ ಇಂದಿಗೂ ನರಕದಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಯುದ್ಧದ ವೇಳೆ ಗಾಜಾದಲ್ಲಿ ಸುಮಾರು 22 ಆಸ್ಪತ್ರೆಗಳ ಮೇಲೆ ದಾಳಿ ನಡೆದಿದ್ದು, ಅವು ಈಗ ಕೇವಲ ಅವಶೇಷದಿಂದ ಕೂಡಿದ ಕಟ್ಟಡಗಳಾಗಿ ಮಾತ್ರ ಉಳಿದಿವೆ.
ಮೂಲಸೌಕರ್ಯಕ್ಕೂ ಬರ
ನಾಶಗೊಂಡ ಆರೋಗ್ಯ ಮೂಲಸೌಕರ್ಯ ಮತ್ತು ಕಳಪೆ ಸಾರಿಗೆ ವ್ಯವಸ್ಥೆಯಿಂದಾಗಿ, ಖಾನ್ ಯೂನಿಸ್ ಪ್ರದೇಶದಲ್ಲಿರುವ ನಾಸರ್ ಆಸ್ಪತ್ರೆಯನ್ನು ತಲುಪಲು ಪ್ಯಾಲೆಸ್ಟೀನ್‌ನ ಫತಿ ಹಾಜಿ ಎನ್ನುವವರು ಕತ್ತೆಗಾಡಿಯನ್ನು ಬಳಸಿರುವುದು ಗಾಜಾದ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.
ಇನ್ನೊಂದೆಡೆ ಗಾಲಿಕುರ್ಚಿಗಳಲ್ಲಿ ಕುಳಿತ ವೃದ್ಧ ಡಯಾಲಿಸಿಸ್‌ಗೆ ತೆರಳಿದ್ದು ಇದೇ ಕತ್ತೆಗಾಡಿಯ ಮೂಲಕ. ಈ ಬಗ್ಗೆ ಮಾತನಾಡಿರುವ ವೃದ್ಧನ ಮೊಮ್ಮಗ ಸೈಫ್, 'ಈ ಕತ್ತೆಬಂಡಿ ಸಾಗಲೂ ಸರಿಯಾದ ರಸ್ತೆಗಳಿಲ್ಲ. ಪ್ರತಿ 50 ಮೀಟರ್‌ಗೊಮ್ಮೆ ನಿಲ್ಲಿಸಿ ಅಜ್ಜ ಕುಳಿತಿರುವ ಗಾಲಿಕುರ್ಚಿಗಳನ್ನು ಸರಿಪಡಿಸಿಕೊಂಡು ಸಾಗುತ್ತೇನೆ' ಎಂದಿದ್ದಾರೆ.
ಜನ ಕತ್ತೆಗಾಡಿಗಳ ಮೇಲೆ ಪ್ರಯಾಣಿಸುತ್ತಿರುವ ಮನಕಲಕುವ ಫೋಟೊ, ವಿಡಿಯೊಗಳ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.
ಚಿಕಿತ್ಸೆಯೂ ಇಲ್ಲ
ಕತ್ತೆಬಂಡಿ ಏರಿ ಜನ ಆಸ್ಪತ್ರೆ ತಲುಪಿದರೂ, ಅಲ್ಲಿ ಚಿಕಿತ್ಸೆಯ ವ್ಯವಸ್ಥೆ ಅಧ್ವಾನವಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ 2025ರಲ್ಲೇ ಶೇ 94ರಷ್ಟು ಆಸ್ಪತ್ರೆಗಳು ಹಾನಿಗೊಳಗಾಗಿವೆ.
ವರದಿಗಳ ಪ್ರಕಾರ, ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರಗಳೂ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅನೇಕ ರೋಗಿಗಳು ಚಿಕಿತ್ಸೆಯನ್ನೇ ಪಡೆಯುತ್ತಿಲ್ಲ. 19 ಆಸ್ಪತ್ರೆಗಳ ಪೈಕಿ 12ರಲ್ಲಿ ಕೇವಲ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿದೆ. ಈ ಬಗ್ಗೆ ಗಾಜಾ ಸರ್ಕಾರವೂ ಕಳವಳ ವ್ಯಕ್ತಪಡಿಸಿದೆ ಎಂದು ಆಲ್‌ಝಝೀರಾ ವರದಿ ತಿಳಿಸಿದೆ.

