ಬದಿಯಡ್ಕ: ಕನ್ನೆಪ್ಪಾಡಿಯಿಂದ ಹಸುವನ್ನು ಕದ್ದು ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಇಬ್ಬರನ್ನು ಬದಿಯಡ್ಕ ಪೋಲೀಸರು ಬಂಧಿಸಿದ್ದಾರೆ. ಬಂಧಿತರು ಮಂಗಳೂರು ಮೂಲದವರು ಎಮದು ತಿಳಿದುಬಂದಿದೆ.
ಜುಲೈ 3, ಶುಕ್ರವಾರ ಮಧ್ಯಾಹ್ನ ಮಂಗಳೂರು ಪೇಟೆಯಲ್ಲಿ ಮಂಗಳೂರಿನ ರಾಝಿಕ್ (21) ಮತ್ತು ಉಳ್ಳಾಲ ಪೋಲೀಸ್ ಠಾಣಾ ವ್ಯಾಪ್ತಿಯ ಮೊಹಮ್ಮದ್ ಇರ್ಬಾಸ್ (26) ಅವರನ್ನು ತನಿಖಾ ತಂಡ ಬಂಧಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಮೂವರು ವ್ಯಕ್ತಿಗಳಿಗಾಗಿ ತೀವ್ರ ತನಿಖೆ ನಡೆಯುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಕಳ್ಳತನಕ್ಕೆ ಬಳಸಲಾಗಿದೆ ಎಂದು ಶಂಕಿಸಲಾಗಿರುವ ಸಿಲೋ ಕಾರನ್ನು ಪೋಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಕದ್ದ ಹಸುವನ್ನು ಉಳ್ಳಾಲದ ಕಸಾಯಿಖಾನೆಯಲ್ಲಿ ಮಾರಾಟ ಮಾಡಿದ್ದಾಗಿ ಬಂಧಿತರು ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿರುವುದಾಗಿ ಪೋಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಪತ್ತೆಯಾದ ಕಳ್ಳವು:
ಜೂನ್ 16, ರಂದು ಮಂಗಳವಾರ ಬೆಳಗಿನ ಜಾವ 1.30 ರ ಸುಮಾರಿಗೆ ಕನ್ನೆಪ್ಪಾಡಿಯ ರಹಮತ್ ಮಂಜಿಲ್ನಲ್ಲಿರುವ ಕೆ.ಎಂ. ಮೊಹಮ್ಮದ್ ಅವರ ಮನೆಯ ಮುಂಭಾಗದ ಅಂಗಡಿಯ ವರಾಂಡದಿಂದ ಸುಮಾರು 30,000 ರೂ. ಮೌಲ್ಯದ ಹಸುವನ್ನು ಕಳವು ಮಾಡಲಾಗಿತ್ತು. ಮನೆ ಮಾಲೀಕರು ಬೆಳಿಗ್ಗೆ ಎಚ್ಚರವಾದಾಗ ಹಸು ಕಾಣೆಯಾಗಿರುವುದನ್ನು ಕಂಡು ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹಸುವನ್ನು ಸಿಲೋ ಕಾರಿನಲ್ಲಿ ಕೊಂಡೊಯ್ಯುತ್ತಿರುವುದು ಗಮನಿಸಿದರು. ನಂತರ ಅವರು ಬದಿಯಡ್ಕ ಪೋಲೀಸರಿಗೆ ದೂರು ನೀಡಿದ್ದರು.
ತನಿಖಾ ತಂಡ:
ಸಿಐ ಅನೂಪ್ ಕೃಷ್ಣ ಅವರ ಮೇಲ್ವಿಚಾರಣೆಯಲ್ಲಿ ಎಸ್ಐ ಸುಕುಮಾರನ್, ಎಎಸ್ಐ ಪ್ರಸಾದ್, ಹಿರಿಯ ಸಿವಿಲ್ ಪೋಲೀಸ್ ಅಧಿಕಾರಿ ಗೋಕುಲ್, ಸಿವಿಲ್ ಪೋಲೀಸ್ ಅಧಿಕಾರಿಗಳಾದ ಅಜಿತ್, ಶ್ರೀನೇಶ್ ಮತ್ತು ಹರಿಪ್ರಸಾದ್ ಅವರನ್ನೊಳಗೊಂಡ ತಂಡವು ಅವರನ್ನು ಪತ್ತೆಹಚ್ಚಿ ಬಂಧಿಸಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ. ಪರಾರಿಯಾಗಿರುವ ಮೂವರನ್ನು ಹಿಡಿಯಲು ತನಿಖೆ ಪ್ರಗತಿಯಲ್ಲಿದೆ.
ಏತನ್ಮಧ್ಯೆ, ಕನ್ನೆಪ್ಪಾಡಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ದನಗಳ ಕಳ್ಳತನ ಸಾಮಾನ್ಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಇಂತಹ ಕಳ್ಳತನ ತಂಡಗಳು ಹೆಚ್ಚು ಸಕ್ರಿಯವಾಗುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ ರಾತ್ರಿ ಗಸ್ತು ಮತ್ತು ಕಣ್ಗಾವಲು ತೀವ್ರಗೊಳಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.


.jpg)
