ಟೆಹರಾನ್ : ಟ್ರಂಪ್ ಆಡಳಿತವು ತಿಳುವಳಿಕಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ, ಅಮೆರಿಕಕ್ಕೆ ಮರೆಯಲಾಗದ ಪಾಠಗಳನ್ನು ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇರಾನ್ನೊಂದಿಗಿನ ಪ್ರಾಥಮಿಕ ಒಪ್ಪಂದದ ಉಲ್ಲಂಘನೆಯು ಅಮೆರಿಕ ಅಧ್ಯಕ್ಷರ ಸಹಿ ನಿಷ್ಪ್ರಯೋಜಕ ಮತ್ತು ನಂಬಿಕೆಗೆ ಅರ್ಹವಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಅಮೆರಿಕಾದ ಸುಳ್ಳು, ಅತಾರ್ಕಿಕ, ನಂಬಿಕೆದ್ರೋಹಿ ಮತ್ತು ಕೀಳು ಸ್ವಭಾವ ಬಯಲಾಗಿದೆ. ಅಮೆರಿಕವು ಬಲವಂತದ ತಂತ್ರ, ಏಕಪಕ್ಷೀಯತೆ ಮತ್ತು ಆಕ್ರಮಣಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ಇತ್ತೀಚಿನ ಬೆಳವಣಿಗೆಗಳು ವಾಶಿಂಗ್ಟನ್ನ ನಿಜವಾದ ಮುಖವನ್ನು ಬಹಿರಂಗಪಡಿಸಿವೆ ಮತ್ತು ಆ ದೇಶ ನಂಬಿಕೆಗೆ ಅರ್ಹವಲ್ಲ ಎಂಬುದಕ್ಕೆ ಸಾಕ್ಷ್ಯ ಒದಗಿಸಿವೆ' ಎಂದು ಖಾಮಿನೈ ಹೇಳಿದ್ದಾರೆಂದು `ಟೆಹ್ರಾನ್ ಟೈಮ್ಸ್' ವರದಿ ಮಾಡಿದೆ
ರಾಷ್ಟ್ರೀಯ ಒಗ್ಗಟ್ಟನ್ನು ಕಾಯ್ದುಕೊಳ್ಳುವುದು ದೇಶದ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿದೆ. ಇರಾನ್ನ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಬಾಹ್ಯ ಬೆದರಿಕೆಗಳನ್ನು ಎದುರಿಸಲು ಏಕತೆಯನ್ನು ಕಾಪಾಡುವಂತೆ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಖಾಮಿನೈ ಒತ್ತಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.

