ಪೆರ್ಲ: ಎಣ್ಮಕಜೆ ಪಂಚಾಯಿತಿಯ ಪೆರ್ಲ-ಸ್ವರ್ಗ-ಪಾಣಾಜೆ ರಸ್ತೆ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗುವಂತೆ ಸ್ವರ್ಗ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಜನಪ್ರತಿನಿಧಿಗಳು ಹಾಗೂ ಸರ್ವಪಕ್ಷ ಮುಖಂಡರನ್ನೊಳಗೊಂಡ ಸಭೆ ಆಗ್ರಹಿಸಿದೆ.
ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಿಂದ ಪೆರ್ಲ-ಸ್ವರ್ಗ-ಪಾಣಾಜೆ ಮೂಲಕ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಪ್ರಸಕ್ತ ರಸ್ತೆ ಅತ್ಯಂತ ಕಿರಿದಾಗಿದ್ದು, ಕಡಿದಾದ ತಿರುವುಗಳಿಂದ ಸಂಚಾರ ದುಸ್ತರವೆನಿಸಿದೆ. ರಸ್ತೆಯ ಎರಡೂ ಬದಿ ಡಾಂಬಾರು ಕಿತ್ತುಕೊಂಡು ನಿರ್ಮಾಣವಾಗಿರುವ ಹೊಂಡಗಳಿಂದ ವಾಹನಗಳು ಅಪಘಾತದ ಭೀತಿ ಎದುರಿಸುತ್ತಿದ್ದು, ತಕ್ಷಣ ರಸ್ತೆ ಅಭಿವೃದ್ಧಿಗೊಳಿಸುವ ಮೂಲಕ ನಾಡಿನ ಜನತೆಯ ಹಲವು ದಶಕಗಳ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಬಿ.ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್ ಜೆ.ಎಸ್. ಮುಖ್ಯ ಭಾಷಣ ಮಾಡಿ, ರಸ್ತೆಯ ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಬೇಧ ಮರೆತು ಎಲ್ಲರೂ ಒಗ್ಗೂಡಬೇಕಾದ ಅನಿವಾರ್ಯತೆಯಿದೆ. ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸುವುದರ ಜತೆಗೆ ರಸ್ತೆಯ ಶಿಥಿಲಾವಸ್ಥೆಯನ್ನು ಸರ್ಕಾರದ ಗಮನಕ್ಕೆ ತಂದು ಕ್ರಮ ಬದ್ಧವಾಗಿ ಫಾಲೋ ಅಪ್ ನಡೆಯಬೇಕು. ಸರ್ಕಾರ ಮಣಿಯದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸಲೂ ಸಜ್ಜಾಗಬೇಕು ಎಂದು ತಿಳಿಸಿದರು.
ಪ್ರಸಕ್ತ ರಸ್ತೆಯ ಕನ್ನಟಿಕಾನ ಪ್ರದೇಶದಲ್ಲಿ ಮೊದಲೇ ಅಗಲಕಿರಿದಾದ ರಸ್ತೆಯ ಅಂಚಿಗೆ ಕೆಎಸ್ಇಬಿ ವಿದ್ಯುತ್ ಕೇಬಲ್ ಭೂಗತವಾಗಿ ಅಳವಡಿಸಲು ಅಗೆದ ಹೊಂಡದ ಮಣ್ಣು ವ್ಯಾಪಕವಾಗಿ ಕೃಷಿಭೂಮಿಗೆ ತುಂಬಿಕೊಳ್ಳುವ ಭೀತಿ ಎದುರಾಗಿದೆ. ಇನ್ನೊಂದೆಡೆ ರಸ್ತೆಯೂ ಹಾಳಾಗಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಕೃಷಿಕ ಕಿಶೋರ್ಕೋಟೆ ಸಭೆಯಲ್ಲಿ ತಮ್ಮ ಆತಂಕ ವ್ಯಕ್ತಪಡಿಸಿದರು.
ಕೇಬಲ್ ಅಳವಡಿಸುವ ಕಾಮಗಾರಿಯಿಂದ ಕೃಷಿಕರಿಗೆ ಸಮಸ್ಯೆಯಾಗದ ಹಾಗೂ ರಸ್ತೆಗೆ ಹಾನಿಯುಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಕೆಎಸ್ಇಬಿ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು. ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಸಚಿವರನ್ನು ಖುದ್ದು ಭೇಟಿಯಾಗುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ತಿಳಿಸಿದರು.
ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವಿಜಯಾ ಕೆ, ಸದಾನಂದ ಶೆಟ್ಟಿ ಕುದ್ವ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ವಿದ್ಯಾಕುಮಾರಿ, ಗ್ರಾಪಂ ಸದಸ್ಯೆ ನಳಿನಾಕ್ಷಿ ಸಿ.ಸಿ., ಯೋಜನಾ ಸಮಿತಿ ಉಪಾಧ್ಯಕ್ಷ ಬಿಎಸ್.ಗಾಂಭೀರ್, ಕೆ.ವೈ.ಸುಬ್ರಹ್ಮಣ್ಯ ಭಟ್, ರಮಾನಂದ ಎಡಮಲೆ, ವೆಂಕಟ್ರಮಣ ಭಟ್ ಎಡಮಲೆ, ಸದಾನಂದ ಬೈರಡ್ಕ, ಈಶ್ವರ ಪ್ರಸಾದ್ ಪಂಬೆತ್ತಡ್ಕ, ಕೃಷ್ಣ ಕುಮಾರ್ ನೆಕ್ಕರೆಕಾಡು, ನಾಗರಾಜ್ ಬಾಳಿಕೆ, ಶಿವಪ್ರಕಾಶ್ ಪಾಲೆಪ್ಪಾಡಿ ಉಪಸ್ಥಿತರಿದ್ದರು.
ಜಿ.ಪಂ ಸದಸ್ಯ ಸೋಮಶೇಖರ್ ಜೆ.ಎಸ್ ಅವರನ್ನು ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಗ್ರಾಪಂ ಸದಸ್ಯ ರಾಮಚಂದ್ರ ಎಂ ಅವರನ್ನು ಸಂಚಾಲಕರಾಗಿ ಹಗೂ ಇತರ ಹತ್ತು ಮಂದಿಯನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಗ್ರಾಪಂ ಸದಸ್ಯ ರಾಮಚಂದ್ರ ಎಂ.ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಗ್ರಾಪಂ ಮಾಜಿ ಸದಸ್ಯ ರವಿ ವಾಣೀನಗರ ವಂದಿಸಿದರು.


.jpg)
