ಅಹಮದಾಬಾದ್: ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಸೋಮವಾರ ಎನ್‌ಕೌಂಟರ್ ಮಾಡಿದ್ದಾರೆ.
'ಬೋರ್ಸಾದ್‌ನಲ್ಲಿ ಆರೋಪಿ ಸುರೇಶ್ ಪರ್ಮಾರ್ (25) ಎಂಬಾತನನ್ನು ಬಂಧಿಸಿ ಆನಂದ್ ನಗರಕ್ಕೆ ಕರೆದೊಯ್ಯುಲಾಗುತ್ತಿತ್ತು.
ಈ ವೇಳೆ, ಅನಾರೋಗ್ಯದ ಕಾರಣ ನೀಡಿ ವಾಹನ ನಿಲ್ಲಿಸುವಂತೆ ಮನವಿ ಮಾಡಿದ್ದಾನೆ. ವಾಹನದಿಂದ ಇಳಿದ ಆರೋಪಿಯು ಚಾಕುವಿನಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಶರಣಾಗುವಂತೆ ಪದೇಪದೇ ಎಚ್ಚರಿಕೆ ನೀಡಿದರೂ ಹಲ್ಲೆ ನಡೆಸುವುದನ್ನು ಮುಂದುವರಿಸಿದ್ದಾನೆ. ಹೀಗಾಗಿ, ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಜಸಾನಿ ತಿಳಿಸಿದ್ದಾರೆ.
ಜುಲೈ 18ರಂದು ಪರ್ಮಾರ್ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯಗಳು ಆನಂದ್ ಜಿಲ್ಲೆಯ ವಸಾದ್ ರೈಲ್ವೆ ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಜುಲೈ 19ರಂದು ಬೆಳಿಗ್ಗೆ ರೈಲ್ವೆ ಹಳಿಗಳ ಬಳಿ ಬಾಲಕಿ ಶವ ಪತ್ತೆಯಾಗಿತ್ತು.

