ನವದೆಹಲಿ: ಆಣೆ-ಪ್ರಮಾಣ, ಕೆಟ್ಟ ಬೈಗುಳ ಮತ್ತು ಅಸಭ್ಯ ಪದಗಳನ್ನು ಬಳಕೆ ಮಾಡುವುದು ಅನಾಗರಿಕ ವರ್ತನೆಯಾದರೂ ಅದು ಅಶ್ಲೀಲತೆಗೆ ಸಮವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ವಿಪುಲ್ ಪಂಚೋಲಿ ಅವರನ್ನು ಒಳಗೊಂಡ ನ್ಯಾಯಪೀಠವು, ಐಪಿಸಿ ಸೆಕ್ಷನ್ 294ರ ಅಡಿಯಲ್ಲಿ ದೋಷಿ ಎಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಹೀಗೆ ಅಭಿಪ್ರಾಯಪಟ್ಟಿತು.
'ಹೇಳಿಕೆಯನ್ನು ಅಶ್ಲೀಲ ಎಂದು ಪರಿಗಣಿಸಬೇಕಾದರೆ ಅದು ಕಾಮಪ್ರಚೋದಕ ಆಗಿರಬೇಕು ಅಥವಾ ಕಾಮದ ಆಸಕ್ತಿಗಳನ್ನು ಕೆರಳಿಸುವಂತಿರಬೇಕು ಮತ್ತು ಮನಸ್ಸನ್ನು ಭ್ರಷ್ಟಗೊಳಿಸುವ ಪ್ರವೃತ್ತಿಯನ್ನು ಹೊಂದಿರಬೇಕಾಗುತ್ತದೆ. ದೂರಿನಲ್ಲಿನ ಎಲ್ಲಾ ಆರೋಪಗಳನ್ನು ಸತ್ಯ ಎಂದು ಒಪ್ಪಿಕೊಂಡರೂ, ಅವುಗಳನ್ನು ಅಶ್ಲೀಲ ಎಂದು ಪರಿಗಣಿಸಲು ಸಾಧ್ಯವಿಲ್ಲ' ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
2017ರಲ್ಲಿ ತಮಿಳುನಾಡಿನಲ್ಲಿ ನಡೆದ ಭೂವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿದಾರರು ಮತ್ತು ಅವರ ಬಾಮೈದನ ಮಧ್ಯೆ ವಾದ-ಪ್ರತಿವಾದ ನಡೆದಿತ್ತು. ಈ ಸಂದರ್ಭದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿದ್ದರು ಎಂದು ಅರ್ಜಿದಾರರು ದೂರಿದ್ದರು.

