ಹೈದರಾಬಾದ್: ಸರ್ಕಾರಿ ಶಾಲಾ ಶಿಕ್ಷಕರು ವಿದೇಶಿ ಭಾಷೆಗಳ ನೈಪುಣ್ಯ ಕಲಿತು ಜರ್ಮನ್, ಜಪಾನೀಸ್ ಹಾಗೂ ಕೊರಿಯನ್‌ನಂತಹ ಭಾಷೆಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಪ್ರೇರೇಪಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕರೆ ನೀಡಿದ್ದಾರೆ.
ಈ ಭಾಷೆಗಳ ಪ್ರಾವೀಣ್ಯತೆಯು ರಾಜ್ಯದ ಯುವ ಜನತೆಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಗಣನೀಯವಾಗಿ ಹೆಚ್ಚಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವನಪರ್ತಿ ಜಿಲ್ಲೆಯ ಕೊತ್ತಕೋಟ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ಭಾಷೆಗಳನ್ನು ಮಾತನಾಡಲು ಕಲಿತರೆ ಸಾಕು ಆಯಾ ದೇಶಗಳಲ್ಲಿ ತಿಂಗಳಿಗೆ ₹2 ಲಕ್ಷದವರೆಗೆ ವೇತನ ನೀಡುವ ಉದ್ಯೋಗಾವಕಾಶಗಳು ಸಿಗಲಿವೆ ಎಂದರು.
ಈ ಹಿಂದೆ ಕೇವಲ ಐಎಎಸ್ ಮತ್ತು ಐಪಿಎಸ್ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದರು. ಆದರೆ, ತೆಲಂಗಾಣದಲ್ಲಿ ಜಾರಿಗೆ ತರಬಹುದಾದ ಅತ್ಯುತ್ತಮ ಶೈಕ್ಷಣಿಕ ನೀತಿಗಳನ್ನು ಅಧ್ಯಯನ ಮಾಡಲು ನಮ್ಮ ಕಾಂಗ್ರೆಸ್ ಸರ್ಕಾರ ಸರ್ಕಾರಿ ಶಿಕ್ಷಕರನ್ನು ವಿದೇಶಿ ಪ್ರವಾಸಕ್ಕೆ ಕಳುಹಿಸುತ್ತಿದೆ ಎಂದರು.
ಶೈಕ್ಷಣಿಕ ಸುಧಾರಣೆಗಾಗಿ ಶ್ರಮಿಸುತ್ತಿರುವ ಶಿಕ್ಷಕರನ್ನು ಶ್ಲಾಘಿಸಿದ ರೇವಂತ್ ರೆಡ್ಡಿ, ಕೇಂದ್ರ ಸರ್ಕಾರದ ಶೈಕ್ಷಣಿಕ ಮತ್ತು ಕಾರ್ಯಕ್ಷಮತೆ ಮಾನದಂಡದಲ್ಲಿ ತೆಲಂಗಾಣ ರಾಜ್ಯವು 18ನೇ ರ್ಯಾಂಕ್ ಪಡೆದಿದೆ ಎಂಬುದನ್ನು ಉಲ್ಲೇಖಿಸಿದರು. ಮುಂಬರುವ ವರ್ಷಗಳಲ್ಲಿ ರಾಜ್ಯವನ್ನು ಒಂದು ಅಥವಾ ಎರಡನೇ ಸ್ಥಾನಕ್ಕೆ ತರಲು ಶಿಕ್ಷಕರು ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.

