HEALTH TIPS

ಏಕಕಾಲಕ್ಕೆ ನೋವು ಮತ್ತು ಭೀತಿ ತಂದೊಡ್ಡುವ ರಾಷ್ಟ್ರೀಯ ಪಕ್ಷಿ; ಮೂಡಿಸಿದ ಆತಂಕ

ಬದಿಯಡ್ಕ: ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಮೊದಲ ಪಟ್ಟಿಯಡಿಯಲ್ಲಿ ರಕ್ಷಿಸಬೇಕಾದ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲುಗಳು ಇದೀಗ ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ವ್ಯಾಪಕವಾಗಿ ಬೀಡುಬಿಟ್ಟಿರುವುದು ಕಂಡುಬರುತ್ತಿದೆ. ಹಳ್ಳಿಗಳಲ್ಲಿ ಬೆಳೆಹಾನಿಗೆ ಕಾರಣವಾಗುವ ಅವುಗಳು, ಹೊರ ಪ್ರದೇಶಗಳಲ್ಲಿ ಹಾದುಹೋಗುವ ರೈಲ್ವೆ ಹಳಿಯಲ್ಲಿ ರೈಲಿಗೆ ಡಿಕ್ಕಿ ಹೊಡೆದು ಸಾಯುತ್ತಿರುವುದು ಕಂಡುಬರುತ್ತಿದ್ದು, ಇದು ಸ್ಥಳೀಯ ನಿವಾಸಿಗಳಿಗೆ ಆಘಾತಕಾರಿ ದೃಶ್ಯವಾಗಿದೆ. ಸುಂದರವಾದ ಬಿಚ್ಚಿದ ಗರಿಗಳೊಂದಿಗೆ ಗ್ರಾಮಾಂತರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನವಿಲುಗಳು ಈ ಹಿಂದೆ ಕುತೂಹಲಕಾರಿ ದೃಶ್ಯವಾಗಿದ್ದರೆ, ಈಗ ಅದು ದುಃಖಕರ ಹಾದಿಯತ್ತ ಬದಲಾಗುತ್ತಿದೆ.


ರೈಲಿಗೆ ಬಲಿಯಾಗುವ ನವಿಲುಗಳು: 

ಒಂದು ಕಾಲದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ವಿರಳವಾಗಿ ಕಾಣುತ್ತಿದ್ದ ಅಪರೂಪದ ಪಕ್ಷಿಯಾಗಿದ್ದ ನವಿಲುಗಳು ಈಗ, ಗ್ರಾಮಾಂತರದಲ್ಲಿ ಅಲೆದಾಡುತ್ತಾ ರೈಲ್ವೆ ಹಳಿಗಳ ಮೇಲೆ ನಡೆಯುತ್ತಿರುವುದು ಮತ್ತು ಎರಡೂ ದಿಕ್ಕುಗಳಿಂದ ಬರುವ ರೈಲುಗಳಿಗೆ ಆಹುತಿಯಾಗುತ್ತಿರುವುದು ಕಳವಳ ಮೂಡಿಸಿದೆ. ಉಪ್ಪಳ, ಶಿರಿಯ, ಕುಂಬಳೆ, ಉದುಮ ಮೊದಲಾದೆಡೆ ಹಲವು ನವಿಲುಗಳು ಸತ್ತುಬಿದ್ದಿರುವುದು ಪಕ್ಷಿಪ್ರೇಮಿಗಳ ಸಹಿತ ಪ್ರಕೃತಿ ಪ್ರೇಮಿಗಳ ನೋವಿಗೆ ಕಾರಣವಾಗಿದೆ.  

ರೈತರ ದೂರು ಬೇರೆಯದೇ:

ಏತನ್ಮಧ್ಯೆ, ಇತ್ತೀಚಿನ ದಿನಗಳಲ್ಲಿ ವಸತಿ ಪ್ರದೇಶಗಳಲ್ಲಿ ನವಿಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಇಳಿಯುತ್ತಿವೆ. ಕೆಲವು ಸ್ಥಳಗಳಲ್ಲಿ ನವಿಲುಗಳು ದೊಡ್ಡ ಪ್ರಮಾಣದಲ್ಲಿ ಬೆಳೆಗಳನ್ನು ನಾಶಮಾಡುತ್ತಿವೆ ಎಂಬ ದೂರುಗಳೂ ಇವೆ. ತರಕಾರಿ ಬೀಜಗಳನ್ನು ಬಿತ್ತಿದ ಪ್ರದೇಶಗಳಿಗೆ ನವಿಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅವುಗಳನ್ನು ನಾಶಮಾಡುತ್ತಿವೆ ಎಂಬುದು ರೈತರ ಮುಖ್ಯ ದೂರು. ನೀರ್ಚಾಲು ಸಮೀಪದ ಮಾನ್ಯ ಬಯಲು, ಮಧೂರು ಪರಿಸರಗಳ ಹಲವು ರೈತರು ಈಗ ಈ ಬಗ್ಗೆ ದೊಡ್ಡಮಟ್ಟಿನ ಧ್ವನಿಯೆತ್ತಿದ್ದು, ರಾಷ್ಟ್ರೀಯ ಪಕ್ಷಿಯೆಂಬ ಕಾರಣಕ್ಕೆ ಇನ್ನು ಸುಮ್ಮನಿರಲಾಗದೆಂದೇ ತುರ್ತು ಕ್ರಮಕ್ಕೆ ಮನವಿ ಮಾಡಿದ್ದಾರೆ.

ಇದೀಗ ರಾಷ್ಟ್ರೀಯ ಪಕ್ಷಿ ರಕ್ಷಿಸಲು ದೇಶದಲ್ಲಿ ಯಾವುದೇ ಕಾನೂನುಗಳಿಲ್ಲವೇ ಎಂಬ ಪ್ರಶ್ನೆಯನ್ನು ಈಗ ವ್ಯಾಪಕವಾಗಿ ಎತ್ತಲಾಗುತ್ತಿದೆ.

ಜೊತೆಗೆ ಬೇರೊಂದು ಡೌಟ್:

ಈ ಮಧ್ಯೆ, ಹಾವುಗಳು ಮತ್ತು ಮಾಲಿನ್ಯ ರಾಶಿಗಳ ಹುಳು-ಹುಪ್ಪಟೆಗಳನ್ನು ವ್ಯಾಪಕವಾಗಿ ಬಳಸುವ ನವಿಲುಗಳು ಬಳಿಕ ವಸತಿ ಪ್ರದೇಶಗಳತ್ತ ಠಳಾಯಿಸಿ ನೀರು ಸೇವಿಸುವುದು ಮತ್ತು ವಸತಿಪ್ರದೇಶಗಳ ಬಳಿ ವಿಶ್ರಮಿಸುತ್ತಿರುವುದು ಬೇರೊಂದು ಪ್ರಶ್ನೆ ಎತ್ತಿದೆ. ಅವುಗಳ ಇಂತಹ ಅಭ್ಯಾಸದಿಂದ ಬ್ಯಾಕ್ಟೀರಿಯಾ, ಶಿಲೀಂದ್ರ ಸಹಿತ ರೋಗಕಾರಕ ಸೂಕ್ಷ್ಮ ಜೀವಿಗಳು ವ್ಯಾಪಕವಾಗಿ ರೋಗ ಹರಡಲು ಕಾರಣವಾಗುವುದೇ(ವಾಹಕಗಳಾಗುತ್ತಿವೆಯೇ) ಎಂಬ ಸಂಶಯ ಮೂಡಿಸಿದೆ. ಈ ಬಗ್ಗೆ ಯಾವುದೇ ಅಧ್ಯಯನಗಳು ಈವರೆಗೆ ನಡೆದಿಲ್ಲ ಎಂಬುದು ಅಷ್ಟೇ ಗಂಭೀರ ವಿಷಯವಾಗಿದ್ದು, ಅದು ಹೌದಾದರೆ ಜನಜೀವನದ ಮೇಲೆ ದೀರ್ಘಕಾಲದ ಕಂಟಕವಾಗಿ ಪರಿಣಮಿಸುವ ಭೀತಿ ಮುಂದಿದೆ. 

ಸಂಬಂಧಪಟ್ಟವರು ಪಶು ವೈದ್ಯಕೀಯ ಇಲಾಖೆ ಮತ್ತು ಸಾಮಾನ್ಯ ಆರೋಗ್ಯ ಇಲಾಖೆ ಜಂಟಿಯಾಗಿ ಅರಣ್ಯ ಇಲಾಖೆಯ ಸಹಾಯದೊಂದಿಗೆ ಈ ನಿಟ್ಟಿನ ತುರ್ತು ಅಧ್ಯಯನ ನಡೆಸಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.

ಹೈಲೈಟ್ಸ್:

-ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಮೊದಲ ಪಟ್ಟಿಯಲ್ಲಿ ನವಿಲುಗಳು ಸಂರಕ್ಷಿತ ಪಕ್ಷಿಯಾಗಿದೆ

-ಎರಡೂ ದಿಕ್ಕುಗಳಿಂದ ಬರುವ ರೈಲುಗಳ ನಡುವೆ ಸಿಲುಕಿ ನವಿಲುಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ

-ಕಾಸರಗೋಡು ಜಿಲ್ಲೆಯ ಜನನಿಬಿಡ ಪ್ರದೇಶಗಳಲ್ಲಿ ನವಿಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ

-ಕೃಷಿಭೂಮಿಗಳಲ್ಲಿ ಇಳಿಯುವ ನವಿಲುಗಳು ಬೆಳೆಗಳನ್ನು ನಾಶಮಾಡುತ್ತಿವೆ ಎಂದು ವ್ಯಾಪಕವಾಗಿ ವರದಿಯಾಗಿದೆ

-ಅವು ಮುಖ್ಯವಾಗಿ ರೈತರು ಬಿತ್ತಿದ ತರಕಾರಿ ಬೀಜಗಳನ್ನು ನಾಶಮಾಡುತ್ತವೆ

-ಜೊತೆಗೆ ವಿವಿಧ ರೋಗಕಾರಕ ಬ್ಯಾಕ್ಟೀರಿಯಾ, ಶಿಲೀಂದ್ರ, ಸೂಕ್ಷ್ಮಾಣುಗಳ ವಾಹಕವಾಗಿವೆಯೇ ಎಂದು ಸಂಶೋಧನೆ ಅಗತ್ಯವಿದೆ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries