ನವದೆಹಲಿ: ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮ ತಡೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಕಠಿಣ ನಿಯಮಗಳನ್ನು ಒಳಗೊಂಡ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಿದೆ.
ಸಂಸತ್ತಿನಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆಯೇ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಈ ಮಸೂದೆಯನ್ನು ಮಂಡಿಸಿದರು.
ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, 5 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಲಕ್ಷದವರೆಗೆ ದಂಡ ವಿಧಿಸಲು ಪ್ರಸ್ತಾಪಿಸಲಾಗಿದೆ.
ಪರೀಕ್ಷಾ ಮಾಫಿಯಾ ಅಥವಾ ಸಂಘಟಿತ ಜಾಲಗಳು ಅಕ್ರಮ ಎಸಗಿದರೆ ₹1 ಕೋಟಿಯವರೆಗೆ ದಂಡ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕ್ರಮಗಳನ್ನು ತಿದ್ದುಪಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದ್ದು, ಚಾರ್ಜ್ಶೀಟ್ ಸಲ್ಲಿಕೆಯಾದ 3 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಲಾಗುವುದು.

