ಬದಿಯಡ್ಕ: ಕೃಷಿಕರು ಕೇವಲ ಬೆಳೆಗಳ ಉತ್ಪಾದಕರಲ್ಲ, ಅವರು ದೇಶದ ಬೆನ್ನೆಲುಬು. ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಹೊಸ ಆಲೋಚನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಕೃಷಿಯನ್ನು ಲಾಭದಾಯಕವಾಗಿಸಲು ಸಾಧ್ಯ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಹೇಳಿದರು.
ಗುರುವಾರ ಬದಿಯಡ್ಕ ಕೃಷಿಭವನದಲ್ಲಿ ಜರಗಿದ ಕೇರಳ ರಾಜ್ಯ ಕೃಷಿ ಅಭಿವೃದ್ಧಿ ಹಾಗೂ ಕ್ಷೇಮ ಇಲಾಖೆಯ ಬದಿಯಡ್ಕ ಗ್ರಾಮಪಂಚಾಯಿತಿ ಕೃಷಿಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆಯ ಏರಿಳಿತಗಳಿಂದ ಕೃಷಿಕರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಇಲಾಖೆ ಮತ್ತು ಪಂಚಾಯಿತಿ ನೀಡುವ ಸೌಲಭ್ಯಗಳನ್ನು ರೈತರು ಸರಿಯಾಗಿ ಬಳಸಿಕೊಳ್ಳಬೇಕು. ಸಾವಯವ ಕೃಷಿ ಮತ್ತು ಮಿಶ್ರ ಬೆಳೆ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸುಸ್ಥಿರ ಆದಾಯ ಕಂಡುಕೊಳ್ಳಬಹುದು. ರೈತರ ಎಲ್ಲ ಕೃಷಿ ಚಟುವಟಿಕೆಗಳಿಗೆ ಪಂಚಾಯಿತಿ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದರು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಸದಸ್ಯ ಖಾದರ್ ಮಾನ್ಯ, ಬದಿಯಡ್ಕ ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ಮತ್ತು ವಿದ್ಯಾಣ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ., ಶ್ಯಾಮಪ್ರಸಾದ ಮಾನ್ಯ, ಶಾಹಿನಾ ಮಾತನಾಡಿದರು. ಸದಸ್ಯರುಗಳಾದ ಶ್ಯಾಮಪ್ರಸಾದ ಸರಳಿ, ಹರೀಶ ಕೆ., ಗಂಗಾಧರ ಗೋಳಿಯಡ್ಕ, ಮಧುಸೂದನ ಕಂಗಿಲ, ಸುಬೈದ, ಬಿಂದ್ಯಾ ಪಾಲ್ಗೊಂಡಿದ್ದರು. ಕೃಷಿ ಅಧಿಕಾರಿಗಳಾದ ಬಿಂದು ಜೋರ್ಜ್ ಸ್ವಾಗತಿಸಿ, ಮೋಹನನ್ ವಂದಿಸಿದರು. ಕೃಷಿಕರ ಸಮಿತಿಯನ್ನು ರೂಪಿಸಲಾಯಿತು.

.jpg)
.jpg)
