ನವದೆಹಲಿ: ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೋನಮ್ ರಘುವಂಶಿ ಅವರಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕೊಲೆ ಪ್ರಕರಣದ ಮುಖ್ಯ ಆರೋಪಿಯಾಗಿರುವ ಸೋನಮ್ ಅವರಿಗೆ ಜಾಮೀನು ನೀಡುವ ಮೂಲಕ ಹೈಕೋರ್ಟ್ ತಪ್ಪು ಮಾಡಿದೆ ಎಂದಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ.
ಸೋನಮ್ ಬಂಧನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿಲ್ಲ ಎಂಬ ಒಂದೇ ಕಾರಣಕ್ಕೆ ಆಕೆಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ಮೆಹ್ತಾ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
'ಮುದ್ರಣ ದೋಷದಿಂದಾಗಿ ದಾಖಲೆಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಜಾಮೀನು ಮಂಜೂರು ಮಾಡಿರುವುದರಿಂದ ಆರೋಪಿ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ಒತ್ತಿ ಹೇಳಿದ್ದಾರೆ.
ಜೂನ್ 29ರಂದು ಮೇಘಾಲಯ ಹೈಕೋರ್ಟ್, ಸೋನಮ್ ರಘುವಂಶಿ ಅವರಿಗೆ ಜಾಮೀನು ಮಂಜೂರು ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು.
ಪತ್ನಿ ಸೋನಮ್ ಜತೆ ಮಧುಚಂದ್ರಕ್ಕೆ ಬಂದಿದ್ದಾಗ 2025ರ ಮೇ 26ರಂದು ರಾಜಾ ನಾಪತ್ತೆಯಾಗಿದ್ದರು. ಜೂನ್ 2ರಂದು ಸೊಹ್ರಾ ಸಮೀಪದ ವೀಸಾಡೊಂಗ್ ಜಲಪಾತದ ಕಣಿವೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಪತ್ನಿಯೇ ಪ್ರಿಯಕರನ ಜೊತೆ ಸೇರಿಕೊಂಡು ಪತಿಯ ಕೊಲೆ ಮಾಡಿದ್ದು ತನಿಖೆಯಲ್ಲಿ ಪತ್ತೆಯಾಗಿತ್ತು. ಪ್ರಕರಣದ ತನಿಖೆಗಾಗಿ ಈಸ್ಟ್ ಕಾಶಿ ಹಿಲ್ ಜಿಲ್ಲೆಯ ನಗರ ಪೊಲೀಸ್ ವರಿಷ್ಠಾಧಿಕಾರಿ ಹರ್ಬಟ್ ಕೆ. ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಮ್ ಪ್ರಿಯಕರ ರಾಜ್ ಕುಶ್ವಾಹ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಸೇರಿಕೊಂಡು ಅಖಿಲೇಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್, ಆನಂದ್ ಕುರ್ಮಿ ಎಂಬುವರ ಸಹಾಯ ಪಡೆದು ರಾಜಾ ರಘುವಂಶಿಯನ್ನು ಕೊಲೆ ಮಾಡಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

