NEET ಮರುಪರೀಕ್ಷೆ ಯಶಸ್ವಿಯಾಗಿ ನಡೆದ ಬಳಿಕ NEET ಪರೀಕ್ಷೆ ಬಗೆಗಿನ ವಿವಾದ ತಣ್ಣಗಾಗುತ್ತಿರುವ ನಡುವೆಯೇ ಈ ಪ್ರಮಾದಗಳು ಬಹಿರಂಗಗೊಂಡಿವೆ.
ಒಂದು ಪ್ರಶ್ನೆಗೆ ಯಾವುದೇ ಸರಿಯಾದ ಉತ್ತರವಿರಲಿಲ್ಲ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಆ ಪ್ರಶ್ನೆಯನ್ನು ಕೈಬಿಡಲಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ನಾಲ್ಕು ಬೋನಸ್ ಅಂಕಗಳು ಸಿಗಲಿವೆ. ಮತ್ತೊಂದು ಪ್ರಶ್ನೆಗೆ ಎರಡು ಉತ್ತರಗಳಿದ್ದು, ಆ ಎರಡನ್ನೂ ಸರಿಯಾದ ಉತ್ತರಗಳೆಂದು ಪರಿಗಣಿಸಲಾಗುತ್ತದೆ.
ಈ ಪರೀಕ್ಷೆ ಒಟ್ಟು 180 ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿದ್ದು, ಪ್ರತಿ ಸರಿಯಾದ ಉತ್ತರಕ್ಕೆ ನಾಲ್ಕು ಅಂಕಗಳನ್ನು ನೀಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿ ಶಾಸ್ತ್ರ ವಿಷಯಗಳಿಗೆ ತಲಾ 45 ಪ್ರಶ್ನೆಗಳಂತೆ ವಿಭಾಗಿಸಲಾಗಿತ್ತು. ಈ ಪ್ರಶ್ನೆಗಳಿಗೆ ಒಟ್ಟು 720 ಅಂಕಗಳನ್ನು ನಿಗದಿಪಡಿಸಲಾಗಿತ್ತು.
ಈ ಬಗ್ಗೆ ದಿಲ್ಲಿಯ 'ವಿಷನರಿ ಮಾಸ್ಟರ್ಸ್' ಸಂಸ್ಥೆಯ ನಿರ್ದೇಶಕರಾದ ಹರ್ಪ್ರೀತ್ ಸಿಂಗ್ ಮಾತನಾಡಿ, 'ವರ್ನಿಯರ್ ಕ್ಯಾಲಿಪರ್ಸ್' ಕುರಿತ ಪ್ರಶ್ನೆಗೆ ನಾಲ್ಕು ಉತ್ತರಗಳ ಆಯ್ಕೆ ನೀಡಲಾಗಿತ್ತು. ಆ ನಾಲ್ಕೂ ಆಯ್ಕೆಗಳು ತಪ್ಪಾಗಿದ್ದವು. ಸರಿಯಾದ ಉತ್ತರ 1.6 ಸೆ.ಮೀ. ಆಗಿದ್ದು, ಅದು ಪ್ರಶ್ನೆಯ ಆಯ್ಕೆಗಳಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ಮತ್ತೊಂದು ಪ್ರಮಾದ ವಿದ್ಯುತ್ಕಾಂತೀಯ ಅಲೆಗಳ ಕುರಿತ ಪ್ರಶ್ನೆಯಲ್ಲಿ ಕಂಡುಬಂದಿದೆ. ತಾತ್ವಿಕವಾಗಿ ಒಂದು ಪ್ರಶ್ನೆಗೆ ಒಂದೇ ಉತ್ತರ ಇರಬೇಕು. ಆದರೆ, ಈ ಪ್ರಶ್ನೆಗೆ ಆಯ್ಕೆ 3 ಮತ್ತು 4 ಎರಡೂ ಸರಿಯಾಗಿವೆ ಎಂದು ಸಿಂಗ್ ತಿಳಿಸಿದ್ದಾರೆ.
NTA ಪೋರ್ಟಲ್ ಪ್ರಕಾರ, ''ಒಂದು ವೇಳೆ ಯಾವುದೇ ಆಯ್ಕೆ ಸರಿಯಾಗಿಲ್ಲದಿದ್ದರೆ, ಪ್ರಶ್ನೆ ತಪ್ಪಾಗಿದ್ದರೆ ಅಥವಾ ಅದನ್ನು ಕೈಬಿಡಲಾಗಿದ್ದರೆ, ಅಭ್ಯರ್ಥಿ ಆ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದಾನೋ ಇಲ್ಲವೋ ಎಂಬುದನ್ನು ಪರಿಗಣಿಸದೆ, ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳಿಗೆ ನಾಲ್ಕು ಅಂಕಗಳನ್ನು ನೀಡಲಾಗುತ್ತದೆ.''

