ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ನೀಟ್ ಯುಜಿ 2026ರ ಅಭ್ಯರ್ಥಿಯೋರ್ವರು ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಧಿಕೃತ ಫಲಿತಾಂಶ ಪೋರ್ಟಲ್‌ನಲ್ಲಿ ಅವರ ಅಂಕಗಳು 24 ಗಂಟೆಗಳಲ್ಲಿ ಮೂರು ಬಾರಿ ಬದಲಾಗಿವೆ ಎಂದು ಆರೋಪಿಸಲಾಗಿದೆ. ಈ ವಿಷಯದ ವಿಚಾರಣೆಯು ಶುಕ್ರವಾರ ನಡೆಯಲಿದೆ.
ಅರ್ಜಿಯ ಪ್ರಕಾರ ನೀಟ್ ಪೋರ್ಟಲ್‌ನಲ್ಲಿ ಅಭ್ಯರ್ಥಿಯ ಅಂಕಗಳು 24 ಗಂಟೆಗಳ ಅವಧಿಯಲ್ಲಿ 650 ರಿಂದ 500ಕ್ಕೆ ಮತ್ತು ಮರುದಿನ 135 ಅಂಕಗಳಿಗೆ ಬದಲಾಗಿವೆ ಎಂದು ಹೇಳಲಾಗಿದೆ.
ವಿದ್ಯಾರ್ಥಿ ಜೂನ್ 21ರಂದು ನಡೆದ ನೀಟ್ ಯುಜಿ 2026 ಮರುಪರೀಕ್ಷೆಗೆ ಹಾಜರಾಗಿದ್ದರು. ತಾತ್ಕಾಲಿಕ ಮತ್ತು ಅಂತಿಮ ಉತ್ತರ ಕೀಗಳೊಂದಿಗೆ ತನ್ನ ಉತ್ತರಗಳನ್ನು ತಾಳೆ ಮಾಡಿದ ನಂತರ, ತನಗೆ ಸುಮಾರು 620 ಅಂಕಗಳು ಬರಬಹುದು ಎಂದು ಅವರು ಅಂದಾಜಿಸಿದ್ದರು. ಆದಾಗ್ಯೂ,ಜುಲೈ 16 ರಂದು ಫಲಿತಾಂಶಗಳು ಪ್ರಕಟಗೊಂಡಾಗ ನೀಟ್ ಪೋರ್ಟಲ್ ಆರಂಭದಲ್ಲಿ 650 ಅಂಕಗಳನ್ನು ತೋರಿಸಿತ್ತು.
ಅಭ್ಯರ್ಥಿಯು ಪೋರ್ಟಲ್‌ನಿಂದ ಲಾಗ್‌ಔಟ್ ಆಗಿ ಮತ್ತೆ ಸೈನ್ ಇನ್ ಮಾಡಿದ ನಂತರ ಅವರ ಅಂಕಗಳು 500 ಕ್ಕೆ ಬದಲಾಗಿದ್ದವು. ಮರುದಿನ ಪ್ರದರ್ಶಿಸಲಾದ ಅಂಕಗಳು 135ಕ್ಕೆ ಕುಸಿದಿದ್ದವು ಎಂದು ಅರ್ಜಿಯಲ್ಲಿ ದೂರಲಾಗಿದೆ.
ಎನ್‌ಟಿಎ ಪ್ರದರ್ಶಿಸಿದ ಒಎಂಆರ್ ಉತ್ತರ ಪತ್ರಿಕೆಯು ಪರೀಕ್ಷೆಯ ಸಮಯದಲ್ಲಿ ತಾನು ಭರ್ತಿ ಮಾಡಿದ್ದಲ್ಲ ಎಂದು ಪ್ರತಿಪಾದಿಸಿರುವ ವಿದ್ಯಾರ್ಥಿಯು, ಮೌಲ್ಯಮಾಪನ ಪ್ರಕ್ರಿಯೆಯ ಸ್ವತಂತ್ರ ಪರಿಶೀಲನೆಗಾಗಿ ತನ್ನ ಮೂಲ ಭೌತಿಕ ಒಎಂಆರ್ ಉತ್ತರ ಪತ್ರಿಕೆಯನ್ನು ಹಾಜರುಪಡಿಸಲು ಮತ್ತು ಸಂರಕ್ಷಿಸಲು ಎನ್‌ಟಿಎಗೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

