HEALTH TIPS

ಪಾಕಿಸ್ತಾನದಿಂದ ಬೇರ್ಪಟ್ಟ ಬಲೂಚಿಸ್ತಾನ? ಆಗಸ್ಟ್ 11ರಂದು ಸ್ವಾತಂತ್ರ್ಯ ದಿನಾಚರಣೆ!

ಇಸ್ಲಾಮಾಬಾದ್‌: ಕಳೆದ ಕೆಲವು ತಿಂಗಳಿನಿಂದ ಪಾಕಿಸ್ತಾನದ ಜತೆ ಸೆಣಸಾಟ ನಡೆಸುತ್ತಿರುವ ಬಲೂಚ್​​ ಪ್ರಾಂತ್ಯವು ತಾನು ಸ್ವತಂತ್ರವಾಗಿರುವುದಾಗಿ ಘೋಷಿಸಿದೆ. ಜತೆಗೆ, ಆಗಸ್ಟ್​ 11ರಂದು ಸ್ವಾತಂತ್ರ್ಯ ದಿನ ಆಚರಿಸುವುದಾಗಿ ಹೇಳಿಕೊಂಡಿದ್ದು, ಜಗತ್ತಿನಾದ್ಯಂತ ಇರುವ ಬಲೂಚ್ ಜನರಿಗೆ ಈ ಸಂದರ್ಭವನ್ನು ಆಚರಿಸಲು ಕರೆ ನೀಡಿದೆ. 


ಬಲೂಚಿಸ್ತಾನ ಗಣರಾಜ್ಯವು ಬಲೂಚ್ ಸಮುದಾಯಗಳಿಗೆ ರಾಷ್ಟ್ರೀಯ ಏಕತೆಯೊಂದಿಗೆ ಈ ದಿನವನ್ನು ಆಚರಿಸಲು ಒತ್ತಾಯಿಸಿದೆ. ಸ್ವತಂತ್ರ ಮತ್ತು ಸಾರ್ವಭೌಮ ಬಲೂಚಿಸ್ತಾನ ಎಂದು ಗುರುತಿಸುವಂತೆಯೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ.

ಸ್ವತಂತ್ರ 'ಬಲೂಚಿಸ್ತಾನ ಗಣರಾಜ್ಯ'ದ ಕುರಿತಾದ ಪ್ರತಿಪಾದನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆದಾಗ್ಯೂ, ಪಾಕಿಸ್ತಾನವು ಈ ಘೋಷಣೆಯನ್ನು ಉಲ್ಲೇಖಿಸಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಮೌನಕ್ಕೆ ಶರಣಾದ ಪಾಕ್

ಸ್ವಾತಂತ್ರ್ಯ ದಿನಾಚರಣೆ ಕುರಿತು ಬಲೂಚಿಸ್ತಾನ ಗಣರಾಜ್ಯ ಹೊರಡಿಸಿರುವ ಪ್ರಕಟಣೆ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಹೊರತಾಗಿಯೂ, ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ಪಾಕ್‌ ಸರ್ಕಾರ ನೀಡಿಲ್ಲ.

ಆದಾಗ್ಯೂ, ಬಲೂಚಿಸ್ತಾನ ನಮ್ಮ ದೇಶದ ಅವಿಭಾಜ್ಯ ಅಂಗವಾಗಿದೆ ಎಂಬ ತನ್ನ ಸುದೀರ್ಘ ನಿಲುವನ್ನು ಪಾಕಿಸ್ತಾನ ನಿರಂತರವಾಗಿ ಕಾಯ್ದುಕೊಂಡಿದೆ.

ಮಾಧ್ಯಮ ವರದಿಗಳ ಪ್ರಕಾರ, ಬಲೂಚಿಸ್ತಾನ ಸ್ವಾತಂತ್ರ್ಯದ ಘೋಷಣೆಗಳನ್ನು ಪಾಕ್‌, ಪದೇ ಪದೇ ತಿರಸ್ಕರಿಸಿದೆ ಮತ್ತು ಪ್ರಾಂತ್ಯವು ಪ್ರತ್ಯೇಕಗೊಳ್ಳಲು ಬಿಡುವುದಿಲ್ಲ ಎಂದು ಪ್ರತಿಪಾದಿಸಿದೆ.

ಬಲೂಚ್ ಚಳವಳಿಯು ಜಾಗತಿಕ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರೂ ಪಾಕಿಸ್ತಾನ ಏಕೆ ಮೌನವಾಗಿದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಾಕ್‌ ಮೌನಕ್ಕೆ ಕಾರಣವೇನು?

ಬಲೂಚ್ ಚಳವಳಿಯನ್ನು ಮತ್ತಷ್ಟು ಉತ್ತೇಜಿಸಬಹುದು ಮತ್ತು ವ್ಯಾಪಕ ಅಂತರರಾಷ್ಟ್ರೀಯ ಗಮನವನ್ನೂ ಸೆಳೆಯಬಹುದು. ಆದರೆ, ಮೌನವಾಗಿರುವ ಮೂಲಕ ಈ ವಿಷಯಕ್ಕೆ ಹೆಚ್ಚಿನ ಪ್ರಚಾರ ಸಿಗದಂತೆ ನೋಡಿಕೊಳ್ಳಲು ಪಾಕ್‌ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಲೂಚಿಸ್ತಾನ ಸ್ವಾತಂತ್ರ್ಯದ ಘೋಷಣೆಯ ಹಿಂದೆ ಇರುವ ಗುಂಪನ್ನು ಬಲೂಚಿಸ್ತಾನದ ಕಾನೂನುಬದ್ಧ ಪ್ರತಿನಿಧಿ ಎಂದು ಪಾಕ್ ಗುರುತಿಸುವುದಿಲ್ಲ. ಆದ್ದರಿಂದ ಅಧಿಕೃತ ಪ್ರತಿಕ್ರಿಯೆಯ ಮೂಲಕ 'ಬಲೂಚ್‌' ಪ್ರತಿಪಾದನೆಗಳಿಗೆ ಮಹತ್ವ ನೀಡುವ ಅಗತ್ಯತೆ ಇಲ್ಲ ಎಂದು ಭಾವಿಸಿರಬಹುದು.

ರಾಜಕೀಯ ನಾಯಕರ ಬದಲಿಗೆ ಭದ್ರತಾ ಪಡೆಗಳು ಸಾರ್ವಜನಿಕವಾಗಿ ಭಾಗಿಯಾಗುವುದನ್ನು ತಡೆದು, ಗುಪ್ತಚರ ಮತ್ತು ಕಾನೂನು ಜಾರಿ ಕ್ರಮಗಳ ಮೂಲಕ ಈ ವಿಷಯವನ್ನು ನಿರ್ವಹಿಸುತ್ತಿರುವ ಸಾಧ್ಯತೆಯೂ ಇದೆ ಎಂದು ಮೂಲಗಳು ಉಲ್ಲೇಖಿಸಿವೆ.

ರಾಜಕೀಯ ಲೆಕ್ಕಾಚಾರ

ಬಲೂಚಿಸ್ತಾನ ಸ್ವಾತಂತ್ರ್ಯದ ಘೋಷಣೆಯು ಅಂತರರಾಷ್ಟ್ರೀಯ ಗಮನ ಸೆಳೆಯುವಿಕೆಯ ಮನವಿಯನ್ನೂ ಒಳಗೊಂಡಿದೆ. ಪಾಕ್‌ನಿಂದ ಬರುವ ಪ್ರಬಲ ಪ್ರತಿಕ್ರಿಯೆಯು ಈ ವಿಷಯದತ್ತ ಜಾಗತಿಕ ಮಾಧ್ಯಮಗಳ ಹೆಚ್ಚಿನ ಗಮನ ಸೆಳೆಯಬಹುದು.

ಆದ್ದರಿಂದ ತನ್ನ ಸ್ವಂತ ಸಾರ್ವಜನಿಕ ನಿಲುವನ್ನು ನಿರ್ಧರಿಸುವ ಮೊದಲು ಯಾವುದೇ ವಿದೇಶಿ ಸರ್ಕಾರ, ಅಂತರರಾಷ್ಟ್ರೀಯ ಸಂಸ್ಥೆ ಅಥವಾ ಪ್ರಭಾವಿ ರಾಜಕೀಯ ವ್ಯಕ್ತಿ ಪ್ರತಿಕ್ರಿಯಿಸುತ್ತಾರೆಯೇ ಎಂಬುದನ್ನು ಪಾಕ್ ಕಾದುನೋಡುತ್ತಿದೆ.

ಆಂತರಿಕ ಪರಿಗಣನೆಯೂ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿರಬಹುದು. ಪಾಕಿಸ್ತಾನವು ಸದ್ಯ ಉಗ್ರರ ಹಿಂಸಾಚಾರ, ಆಂತರಿಕ ರಾಜಕೀಯ ಸಮಸ್ಯೆ ಸೇರಿದಂತೆ ಹಲವು ಭದ್ರತಾ, ರಾಜಕೀಯ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ.

ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಣೆ ಕುರಿತು ತಕ್ಷಣವೇ ಪ್ರತಿಕ್ರಿಯಿಸದಿರುವುದೂ ತಂತ್ರಗಾರಿಕೆಯ ಭಾಗವೂ ಆಗಿರಬಹುದು. ಸಾರ್ವಜನಿಕ ಪ್ರಚಾರದ ಮೂಲಕ ಸ್ವಾತಂತ್ರ್ಯ ಚಳವಳಿ ವೇಗ ಪಡೆದುಕೊಳ್ಳಬಹುದು ಎಂದು ಭಾವಿಸಿ ರಾಜಕೀಯ ಘೋಷಣೆಗಳ ಬಗ್ಗೆ ಪ್ರತಿಕ್ರಿಯಿಸದಿರಲು ಪಾಕ್‌ ಸರ್ಕಾರ ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಉದ್ವಿಗ್ನ ಪರಿಸ್ಥಿತಿ...

ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳ ನಡುವೆಯೇ 'ಸ್ವಾತಂತ್ರ್ಯ'ದ ಘೋಷಣೆ ಹೊರಬಿದ್ದಿದೆ. ವರದಿಗಳ ಪ್ರಕಾರ, ಪ್ರಾಂತ್ಯದ ಪ್ರತ್ಯೇಕತಾವಾದಿ ಗುಂಪೊಂದರ ವಿರುದ್ಧದ ಕಾರ್ಯಾಚರಣೆಯ ವೇಳೆ 75 ಉಗ್ರರನ್ನು ಹತ್ಯೆ ಮಾಡಿರುವುದಾಗಿ ಪಾಕ್ ಭದ್ರತಾ ಪಡೆಗಳು ಹೇಳಿಕೊಂಡಿವೆ.

ಇತ್ತೀಚೆಗೆ ನಡೆದ ದಾಳಿಯಲ್ಲಿ ಹತ್ಯೆಯಾದ ಪೋಲಿಸರ ಕುಟುಂಬಗಳನ್ನು ಭೇಟಿಯಾಗಲು ಪ್ರಧಾನಿ ಶಹಬಾಜ್ ಶರೀಫ್ ಕ್ವೆಟ್ಟಾಗೆ ಭೇಟಿ ನೀಡಿದ ಮರುದಿನ ಈ ಕಾರ್ಯಾಚರಣೆ ನಡೆದಿದೆ.

ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಅಲ್ಲಿನ ಜನಸಾಂದ್ರತೆ ಅತ್ಯಂತ ಕಡಿಮೆ ಇದೆ. ಪಾಕಿಸ್ತಾನದಿಂದ ಹೆಚ್ಚಿನ ಸ್ವಾಯತ್ತತೆ ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನು ಒತ್ತಾಯಿಸುತ್ತಿರುವ ಬಲೂಚ್ ಗುಂಪುಗಳು ದೀರ್ಘಕಾಲದಿಂದಲೂ ಸಕ್ರಿಯವಾಗಿವೆ.

ಪಾಕ್‌ ಮೌನದ ಅರ್ಥವೇನು?

ಪಾಕಿಸ್ತಾನದ ಮೌನವು ಬಲೂಚಿಸ್ತಾನದ ಸ್ವಾತಂತ್ರ್ಯ ಘೋಷಣೆಯನ್ನು ಒಪ್ಪಿಕೊಂಡಿದೆ ಎಂಬುದನ್ನು ಸೂಚಿಸುವುದಿಲ್ಲ.

ಬಲೂಚಿಸ್ತಾನವು ಪಾಕ್‌ನ ಭಾಗವಾಗಿದೆ ಎಂಬ ತನ್ನ ದೀರ್ಘಕಾಲದ ನಿಲುವನ್ನು ಇಸ್ಲಾಮಾಬಾದ್ ಬದಲಾಯಿಸಿದೆ ಎಂದಾಗಲಿ, ಅಥವಾ ಭವಿಷ್ಯದಲ್ಲಿ ಯಾವುದೇ ನೀತಿ ಬದಲಾವಣೆಯಾಗಲಿದೆ ಎಂದಾಗಲಿ ಇದು ಸೂಚಿಸುವುದಿಲ್ಲ.

ಈ ಘೋಷಣೆಯ ಮಹತ್ವವು ಮುಂಬರುವ ದಿನಗಳಲ್ಲಿ ನಡೆಯಲಿರುವ ಬೆಳವಣಿಗೆಗಳನ್ನು ಅವಲಂಬಿಸಿರುತ್ತದೆ. ಪಾಕಿಸ್ತಾನವು ಅಂತಿಮವಾಗಿ ಸಾರ್ವಜನಿಕವಾಗಿ ಪ್ರತಿಕ್ರಿಯಿಸುತ್ತದೆಯೇ?, ವಿದೇಶಿ ಸರ್ಕಾರಗಳು ಪ್ರತಿಕ್ರಿಯಿಸುತ್ತವೆಯೇ ಅಥವಾ ಬಲೂಚ್ ಸ್ವಾತಂತ್ರ್ಯ ಅಭಿಯಾನವು ವ್ಯಾಪಕ ಅಂತರರಾಷ್ಟ್ರೀಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದು ಪ್ರಮುಖ ಪ್ರಶ್ನೆಗಳಾಗಿವೆ.

ಪಾಕ್‌ನ ಮೌನವನ್ನು ನೀತಿಯಲ್ಲಿನ ಯಾವುದೇ ಬದಲಾವಣೆಯ ಪ್ರತೀಕ ಎಂದು ನೋಡುವ ಬದಲಿಗೆ, ಒಂದು ತಂತ್ರಗಾರಿಕೆ ಎಂದೇ ನೋಡಬೇಕಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries