ಬೊಗೊಟಾ: ಕೊಲಂಬಿಯಾದಲ್ಲಿ ಸೋಮವಾರ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 224ಕ್ಕೆ ಏರಿಕೆಯಾಗಿದೆ. ಮೂರು ಸಾವಿರಕ್ಕೂ ಹೆಚ್ಚಿನ ಜನರು ನಾಪತ್ತೆಯಾಗಿದ್ದಾರೆ.
ಪಶ್ಚಿಮ ಕೊಲಂಬಿಯಾದ ಅನೇಕ ನಗರಗಳು ಮತ್ತು ಪಟ್ಟಣಗಳಲ್ಲಿ 1,600ಕ್ಕೂ ಹೆಚ್ಚಿನ ಕಟ್ಟಡಗಳಿಗೆ ಹಾನಿಯಾಗಿದ್ದು, ಅನೇಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.
ಯೋಧರು, ರಕ್ಷಣಾ ಸಿಬ್ಬಂದಿ ಶೋಧ ಹಾಗೂ ರಕ್ಷಣಾ ಕಾರ್ಯ ನಡೆಸಿದ್ದಾರೆ.
ಭೂಕಂಪದ ಕೇಂದ್ರಬಿಂದುವಿನ ಸುತ್ತಲಿನ ಪ್ರದೇಶವಾದ ಚೋಕೊ, ಕೊಲಂಬಿಯಾದ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಇದು ಹೆಚ್ಚಾಗಿ ಪರಸ್ಪರ ಹೋರಾಡುವ ಸಶಸ್ತ್ರ ಗುಂಪುಗಳಿಂದ ತತ್ತರಿಸಿದೆ. ಚೋಕೊದ ಹೆಚ್ಚಿನ ಭಾಗಗಳನ್ನು ದೋಣಿ, ವಿಮಾನ ಹಾಗೂ ಕಾಡು ದಾರಿಯ ಮೂಲಕ ಮಾತ್ರ ತಲುಪಲು ಸಾಧ್ಯವಿದೆ. ಹೀಗಾಗಿ, ಅಲ್ಲಿ ಉಂಟಾಗಿರುವ ಹಾನಿಯ ಪ್ರಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ದೇಶದ ನೂತನ ಅಧ್ಯಕ್ಷ ಅಬೆಲಾರ್ಡೊ ಡೆಲಾ ಎಸ್ಪ್ರಿಯೆಲ್ಲಾ ಅವರು ಸೋಮವಾರ ರಾತ್ರಿ ಚೋಕೊದ ರಾಜಧಾನಿಯಾದ ಕ್ವಿಬ್ಡೋಗೆ ಭೇಟಿ ನೀಡಿದ್ದರು.
ಶುಕ್ರವಾರವಷ್ಟೇ ಪ್ರಮಾಣವಚನ ಸ್ವೀಕರಿಸಿದ್ದ ಅಬೆಲಾರ್ಡೊ ಡೆಲಾ ಎಸ್ಪ್ರಿಯೆಲ್ಲಾ ಅವರಿಗೆ ಈ ಭೂಕಂಪವು ಮೊದಲ ಅಗ್ನಿಪರೀಕ್ಷೆಯಾಗಿದೆ.

