ನವದೆಹಲಿ (PTI): ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಪೇಟೆಯಲ್ಲಿ ಷೇರುಗಳನ್ನು ಖರೀದಿಸುವುದನ್ನು ಮುಂದುವರಿಸಿದ್ದು, ಸತತ ಎರಡನೇ ತಿಂಗಳಾದ ಆಗಸ್ಟ್‌ನ ಇದುವರೆಗೆ ನಿವ್ವಳ ₹30,919 ಕೋಟಿ ಹೂಡಿಕೆ ಮಾಡಿದ್ದಾರೆ. ಜುಲೈನಲ್ಲಿ ನಿವ್ವಳ ₹20,200 ಕೋಟಿ ಹೂಡಿಕೆ ಮಾಡಿದ್ದರು.
ಕಂಪನಿಗಳ ಜೂನ್ ತ್ರೈಮಾಸಿಕದ ಗಳಿಕೆ ಉತ್ತಮವಾಗಿರುವುದು, ರೂಪಾಯಿ ಮೌಲ್ಯದಲ್ಲಿ ಸ್ಥಿರತೆ, ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಕಡಿಮೆ ಆಗುತ್ತಿರುವುದು ವಿದೇಶಿ ಹೂಡಿಕೆದಾರರಿಗೆ ದೇಶದ ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಉತ್ತೇಜನ ನೀಡಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ವಿದೇಶಿ ಹೂಡಿಕೆದಾರರು ಜೂನ್‌ನಲ್ಲಿ ನಿವ್ವಳ ₹49,340 ಕೋಟಿ, ಮೇ ತಿಂಗಳಲ್ಲಿ ₹32,963 ಕೋಟಿ, ಏಪ್ರಿಲ್‌ನಲ್ಲಿ ₹60,847 ಕೋಟಿ ಹಾಗೂ ಮಾರ್ಚ್‌ನಲ್ಲಿ ₹1.17 ಲಕ್ಷ ಕೋಟಿ ಹೂಡಿಕೆ ಹಿಂಪಡೆದಿದ್ದರು. ಫೆಬ್ರುವರಿಯಲ್ಲಿ ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಗಳಲ್ಲಿ ನಿವ್ವಳ ₹22,615 ಕೋಟಿ ಹೂಡಿಕೆ ಮಾಡಿದ್ದರು ಎಂದು ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ ಲಿಮಿಟೆಡ್ (ಸಿಡಿಎಸ್‌ಎಲ್) ಅಂಕಿ-ಅಂಶಗಳು ಹೇಳುತ್ತವೆ.
ಆಗಸ್ಟ್ ಹೂಡಿಕೆ ಹೊರತಾಗಿಯೂ 2026ರಲ್ಲಿ ಇದುವರೆಗೆ ವಿದೇಶಿ ಹೂಡಿಕೆದಾರರು ದೇಶದ ಷೇರು ಮಾರುಕಟ್ಟೆಗಳಿಂದ ನಿವ್ವಳ ₹2.23 ಲಕ್ಷ ಕೋಟಿ ಮೊತ್ತವನ್ನು ಹಿಂಪಡೆದಿದ್ದಾರೆ. ಹಿಂದಿನ ವರ್ಷದಲ್ಲಿ ಅವರು ಹಿಂಪಡೆದಿದ್ದ ಮೊತ್ತವು ₹1.66 ಲಕ್ಷ ಕೋಟಿಯಷ್ಟು ಆಗಿತ್ತು.

