HEALTH TIPS

ದೆಹಲಿ: 47 ಕಿ.ಮೀ. ತಡೆಯಿಲ್ಲದೆ ಚಲಿಸಿದ್ದ ಬಸ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರ

ನವದೆಹಲಿ: 2012ರ ನಿರ್ಭಯಾ ಪ್ರಕರಣದ ಬಳಿಕ ದೆಹಲಿಯಲ್ಲಿ ಮಹಿಳೆಯರ ಹಾಗೂ ಹೆಣ್ಣುಮಕ್ಕಳ ರಕ್ಷಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದ್ದರೂ, ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಅಂತಹುದೇ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.


ಗ್ರೇಟರ್ ನೋಯ್ಡಾದಿಂದ ದೆಹಲಿಯ ಕಾಶ್ಮೀರಿ ಗೇಟ್‌ವರೆಗೆ ಸುಮಾರು 47 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಿದ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಈ ಪ್ರಯಾಣದುದ್ದಕ್ಕೂ ಬಸ್ ಅನ್ನು ಯಾವುದೇ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ನಡೆಸದೇ ಇರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ವಿವರ

ಆಗಸ್ಟ್‌ 4ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ಬಸ್‌ನಲ್ಲಿ ತೆರಳುತ್ತಿದ್ದ ಬಾಲಕಿ, ಮಾರ್ಗ ಮಧ್ಯೆ ತಪ್ಪಾಗಿ ಬೇರೆ ನಿಲ್ದಾಣದಲ್ಲಿ ಇಳಿದಿದ್ದಳು ಎನ್ನಲಾಗಿದೆ. ರಾತ್ರಿ ವೇಳೆ ಅಪರಿಚಿತ ಪ್ರದೇಶದಲ್ಲಿ ಸಿಲುಕಿದ್ದ ಆಕೆ, ಆ ಮಾರ್ಗವಾಗಿ ತೆರಳುತ್ತಿದ್ದ ಖಾಲಿ ಸ್ಲೀಪರ್‌ ಬಸ್‌ಗೆ ಕೈ ತೋರಿಸಿ ನಿಲ್ಲಿಸಿದ್ದಳು.

ಬಾಲಕಿ ಸಂಕಷ್ಟದಲ್ಲಿರುವುದನ್ನು ಗಮನಿಸಿದ ಚಾಲಕ ಕುಲದೀಪ್‌ ಹಾಗೂ ನಿರ್ವಾಹಕ ಸಂದೀಪ್‌, ಸಹಾಯ ಮಾಡುವುದಾಗಿ ನಂಬಿಸಿ ಆಕೆಯನ್ನು ತಮ್ಮ ಬಸ್‌ಗೆ ಹತ್ತಿಸಿಕೊಂಡಿದ್ದಾರೆ. ಬಳಿಕ ಇಬ್ಬರೂ ಸೇರಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಬಳಿಕ ಆರೋಪಿಗಳು ಬಾಲಕಿಯನ್ನು ದೆಹಲಿಯ ಕಾಶ್ಮೀರಿ ಗೇಟ್‌ ಪ್ರದೇಶದ ಬಳಿ ಇಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಬಾಲಕಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ.

ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ‌ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಸ್ಲೀಪರ್‌ ಬಸ್‌ ಅನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ಮರೆಮಾಚಿದ ಪರದೆಗಳು

ವಾಣಿಜ್ಯ ಪ್ರಯಾಣಿಕ ವಾಹನಗಳ ಒಳಗೆ ಸಾರ್ವಜನಿಕರ ಗೋಚರತೆ ಮರೆಮಾಚುವ ಪರದೆಗಳನ್ನು (curtains) ಹಾಕುವುದು ಕಾನೂನುಬಾಹಿರ. ಆದಾಗ್ಯೂ, ಈ ಬಸ್‌ನ ಕಿಟಕಿಗಳಿಗೆ ದಪ್ಪವಾದ ಪರದೆಗಳನ್ನು ಹಾಕಲಾಗಿತ್ತು. ಇದರಿಂದಾಗಿ ಬಸ್‌ನ ಒಳಗಡೆ ಏನಾಗುತ್ತಿದೆ ಎಂಬುದು ಹೊರಗಿನವರ ಗಮನಕ್ಕೆ ಬಂದಿಲ್ಲ.

ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯೇ ನಡೆದಿಲ್ಲ

ಈ ಬಸ್ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ, ಚಿಲ್ಲಾ ಬಾರ್ಡರ್, ಮಯೂರ್ ವಿಹಾರ್ ಮತ್ತು ಗೀತಾ ಕಾಲೋನಿಯಂತಹ ಅತಿ ಪ್ರಮುಖ ಗಡಿ ಹಾಗೂ ಪ್ರವೇಶ ದ್ವಾರಗಳ ಮೂಲಕ ಹಾದುಬಂದರೂ, ಪೋಲಿಸರು ವಾಹನವನ್ನು ತಪಾಸಣೆಗೆ ಒಳಪಡಿಸಿಲ್ಲ.

ಈ ಬಗ್ಗೆ ಸ್ಪಷ್ಟನೆ ನೀಡಿದ ಪೊಲೀಸರು, ಎಕ್ಸ್‌ಪ್ರೆಸ್‌ವೇನಲ್ಲಿ ಬ್ಯಾರಿಕೇಡ್ ಹಾಕಿದರೆ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸುರಕ್ಷತಾ ಲೋಪ:

ನಿರ್ಭಯಾ ಘಟನೆಯ ನಂತರ ಎಲ್ಲಾ ಪ್ರಯಾಣಿಕ ವಾಹನಗಳಿಗೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ (GPS) ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಈ ವಾಹನದಲ್ಲಿ ಈ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದವೇ ಮತ್ತು ನಿಯಂತ್ರಣ ಕೊಠಡಿಯಿಂದ ಸರಿಯಾದ ಮೇಲ್ವಿಚಾರಣೆ ನಡೆಯುತ್ತಿತ್ತೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಧಿವಿಜ್ಞಾನ ತಂಡದಿಂದ ಮಾದರಿ ಸಂಗ್ರಹ:

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ತಂಡವು ಬಸ್‌ನಿಂದ ತಲೆಗೂದಲು ಮತ್ತು ಜೈವಿಕ ಮಾದರಿಗಳು ಸೇರಿದಂತೆ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಬಾಲಕಿ ಬಸ್ಸಿನಲ್ಲಿ ಇದ್ದಳೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ಬಾಲಕಿಯ ಮಾದರಿಗಳೊಂದಿಗೆ ತಾಳೆ ಮಾಡಲಾಗುತ್ತದೆ. ಬಂಧಿತ ಚಾಲಕ ಮತ್ತು ನಿರ್ವಾಹಕರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಗೆ ಕೌನ್ಸೆಲಿಂಗ್:

ಮಾನಸಿಕ ಆಘಾತಕ್ಕೆ ಒಳಗಾಗಿರುವ ಸಂತ್ರಸ್ತ ಬಾಲಕಿಗೆ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲೇ ಅಗತ್ಯ ಕೌನ್ಸೆಲಿಂಗ್ ನೀಡಲಾಗಿದೆ. ಬಳಿಕ ದೆಹಲಿಗೆ ಆಗಮಿಸಿದ ಕುಟುಂಬದ ಸದಸ್ಯರಿಗೆ ಬಾಲಕಿಯನ್ನು ಹಸ್ತಾಂತರಿಸಲಾಗಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries