ಶಿಮ್ಲಾ: ಹಿಮಾಚಲಪ್ರದೇಶದ ವಿವಿಧೆಡೆ ರವಿವಾರವೂ ಜಡಿಮಳೆ ಮುಂದುವರಿದಿದ್ದು, 225 ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಹಾಗೂ 9 ಜಲವಿದ್ಯುತ್ ಪೂರೈಕೆ ವ್ಯವಸ್ಥೆಗಳಲ್ಲಿ ವ್ಯತ್ಯಯವಾಗಿದೆ. ಹಲವೆಡೆ ಭೂಕುಸಿತದ ಘಟನೆಗಳು ಸಂಭವಿಸಿದ್ದು, ರಾಜ್ಯದ 64 ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಮಂಡಿಯಲ್ಲಿ ಗರಿಷ್ಠ 24 ರಸ್ತೆಗಳು ಮುಚ್ಚಲಾಗಿದ್ದರೆ, ಕುಲುವಿನಲ್ಲಿ 16 ರಸ್ತೆಗಳನ್ನು ಮುಚ್ಚಲಾಗಿದೆ. ಕಾಂಗ್ರಾ ಹಾಗೂ ಸಿರ್ಮಾವುರ್ನಲ್ಲಿ ಏಳು ರಸ್ತೆಗಳು ಹಾಗೂ ಉನಾದಲ್ಲಿ ನಾಲ್ಕು ರಸ್ತೆಗಳು, ಶಿಮ್ಲಾದಲ್ಲಿ ಮೂರು , ಚಂಬಾದಲ್ಲಿ ಎರಡು ಹಾಗೂ ಲಾಹುಲ್ ಮತ್ತು ಸ್ಪಿಟಿಯಲ್ಲಿ ಒಂದು ರಸ್ತೆ ಬಂದ್ ಆಗಿದೆ.
ಆಗಸ್ಟ್ 31ರಿಂದ ಸೆಪ್ಟೆಂಬರ್ 3ರವರೆಗೆ ಹಿಮಾಚಲ ಪ್ರದೇಶದ ದುರ್ಗಮ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆಯೆಂದು ಶಿಮ್ಲಾದ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದ್ದು, ಯೆಲ್ಲೋ ಆಲರ್ಟ್ ಘೋಷಿಸಿದೆ. ಸುಂದರನಗರ ಹಾಗೂ ಮುರಾರಿ ದೇವಿ ಪ್ರದೇಶಗಳಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 30ರಂದು ಮುಂಗಾರು ಆರಂಭಗೊಂಡಾಗಿನಿಂದ ಕಾಶ್ಮೀರದಲ್ಲಿ ಮಳೆ ಸಂಬಂಧಿತ ದುರಂತಗಳಲ್ಲಿ 103 ಮಂದಿ ಮೃತಪಟ್ಟಿದ್ದಾರೆ ಹಾಗೂ ಆಸ್ತಿಪಾಸ್ತಿಗಳಿಗೆ ಅಂದಾಜು 1184 ಕೋಟಿ ರೂ. ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

