ಠಾಣೆ: ನವಿ ಮುಂಬೈನ ಖಾರ್‌ಘರ್‌ನ ಝೆರಾಕ್ಸ್ ಅಂಗಡಿಯೊಂದರಲ್ಲಿ ಶುಕ್ರವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅರ್ಜಿ ನಮೂನೆಯ ಸಾವಿರಾರು ಮುದ್ರಿತ ಪ್ರತಿಗಳು ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿ ಶಿವಸೇನಾ (ಯುಬಿಟಿ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಬಿಜೆಪಿಯ ಯುವ ಘಟಕದ ಪದಾಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು, ಈ ಅಂಗಡಿಯಿಂದ ಎಸ್‌ಐಆರ್ ಅರ್ಜಿ ನಮೂನೆಗಳ ಮುದ್ರಿತ ಪ್ರತಿಗಳನ್ನು ಪಡೆಯುತ್ತಿದ್ದಾಗ, ಶಿವಸೇನಾ (ಯುಬಿಟಿ) ಕಾರ್ಯಕರ್ತರು ಅವರ ಮೇಲೆ ದಾಳಿ ನಡೆಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಆದರೆ, ಪೊಲೀಸ್ ಠಾಣೆಗೆ ಕರೆತಂದ ಸ್ವಲ್ಪ ಸಮಯದಲ್ಲೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಶಿವಸೇನಾ ಕಾರ್ಯಕರ್ತರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ನವಿ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

