ನವದೆಹಲಿ: ವಾರದಲ್ಲಿ ಐದು ದಿನಗಳ ಕೆಲಸದ ದಿನಗಳ ಜಾರಿಯಲ್ಲಿ ವಿಳಂಬ, ಪರಿಷ್ಕೃತ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಯೋಜನೆ (ಪಿಎಲ್ಐ) ಕುರಿತು ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿದಂತೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ಸರಣಿ ರಾಷ್ಟ್ರವ್ಯಾಪಿ ಮುಷ್ಕರಗಳನ್ನು ಪ್ರಕಟಿಸಿದೆ.
ಇದರಿಂದಾಗಿ ಸೆಪ್ಟೆಂಬರ್ನಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಅಡಚಣೆ ಉಂಟಾಗಬಹುದು.
ಸೆ.11ರಂದು ಒಂದು ದಿನದ ಮುಷ್ಕರ, ಸೆ.28ರಿಂದ 30ರವರೆಗೆ ಮೂರು ದಿನಗಳ ಸುದೀರ್ಘ ಮುಷ್ಕರ ಮತ್ತು ಬೇಡಿಕೆಗಳು ಈಡೇರದಿದ್ದರೆ ಅ.26ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಯೂನಿಯನ್ಗಳು ಕರೆ ನೀಡಿವೆ.
ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರುವುದು, ಹಿರಿಯ ಅಧಿಕಾರಿಗಳಿಗೆ ಮಾತ್ರ ಹೆಚ್ಚಿನ ಪ್ರಯೋಜನ ನೀಡುವ ತಾರತಮ್ಯದ ಪಿಎಲ್ಐ ಯೋಜನೆಯನ್ನು ಹಿಂಪಡೆಯುವುದು, ಹಳೆಯ ಪಿಂಚಣಿ ಯೋಜನೆಯ ಮರುಸ್ಥಾಪನೆ ಮತ್ತು ಪಿಂಚಣಿ ಪರಿಷ್ಕರಣೆ ಸೇರಿದಂತೆ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಯೂನಿಯನ್ಗಳು ಆಗ್ರಹಿಸುತ್ತಿವೆ.

