HEALTH TIPS

ಸುಭಾಷ್ ಚಂದ್ರ ದಿವಾಳಿ ಪ್ರಕ್ರಿಯೆ: ಮತ ಪ್ರಕ್ರಿಯೆ ಬಗ್ಗೆ ಬ್ಯಾಂಕ್‌ಗಳ ತಕರಾರು

ನವದೆಹಲಿ: ಸಾಲದಾತ ಕಂಪನಿಗಳು ಕೇಳಿದ್ದ ₹22,006 ಕೋಟಿಗೆ ಪ್ರತಿಯಾಗಿ ₹6.5 ಕೋಟಿ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ ಅವರು ಮಂಡಿಸಿದ್ದ ಸೂತ್ರಕ್ಕೆ ಅನುಮೋದನೆ ಸಿಗುವಲ್ಲಿ ಚಂದ್ರ ಅವರ ಕುಟುಂಬದ ಜೊತೆ ನಂಟು ಹೊಂದಿರುವ ಐದು ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಕೆಲವು ಸಾಲದಾತ ಕಂಪನಿಗಳು ದೂರಿವೆ.


ಚಂದ್ರ ಕುಟುಂಬದ ಜೊತೆ ನಂಟು ಹೊಂದಿರುವ ಈ ಐದು ಸಂಸ್ಥೆಗಳು ಮತಗಳಲ್ಲಿ ಒಟ್ಟು ಶೇ 61.78ರಷ್ಟು ಪಾಲು ಹೊಂದಿದ್ದವು ಎಂದು ಅವು ಆರೋಪ ಮಾಡಿವೆ. ಮರುಪಾವತಿ ಸೂತ್ರವನ್ನು ಮತಕ್ಕೆ ಹಾಕುವ ಪ್ರಕ್ರಿಯೆಯಿಂದ ಈ ಐದು ಸಂಸ್ಥೆಗಳನ್ನು ಹೊರಗಿಡಬೇಕಿತ್ತು ಎಂದು ಅವು ಹೇಳಿವೆ. ಈ ಸಂಸ್ಥೆಗಳ ಮತಗಳ ಕಾರಣದಿಂದಾಗಿ ಇತ್ಯರ್ಥ ಸೂತ್ರಕ್ಕೆ ಶೇ 80.81ರಷ್ಟು ಮತಗಳು ದೊರೆತವು ಎಂಬ ವಿವರವು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಆದೇಶದಲ್ಲಿ ಇದೆ.

ವೀಣಾ ಇನ್ವೆಸ್ಟ್‌ಮೆಂಟ್ಸ್‌ ಪ್ರೈ.ಲಿ., ಡೈರೆಕ್ಟ್ ಮೀಡಿಯಾ ಡಿಸ್ಟ್ರಿಬ್ಯೂಷನ್ವೆಂಚರ್ಸ್ ಪ್ರೈ.ಲಿ., ವರ್ಲ್ಡ್‌ ಕ್ರೆಸ್ಟ್‌ ಅಡ್ವೈಸರ್ಸ್‌ ಎಲ್‌ಎಲ್‌ಪಿ, ಲೆಮನೇಡ್‌ ಕ್ಯಾಪಿಟಲ್ ಅಡ್ವೈಸರ್ಸ್‌ ಎಲ್‌ಎಲ್‌ಪಿ ಮತ್ತು ಕಾರ್ಪ್‌ಕಾಲ್‌ ಅಡ್ವೈಸರ್ಸ್‌ ಎಲ್‌ಎಲ್‌ಪಿ ಈ ಐದು ಕಂಪನಿಗಳು.

ಈ ಐದು ಕಂಪನಿಗಳು ದಿವಾಳಿ ಸಂಹಿತೆಯಲ್ಲಿ ಹೇಳಲಾಗಿರುವ 'ಸಹವರ್ತಿಗಳು' ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುತ್ತವೆ. ಹೀಗಾಗಿ ಇವುಗಳ ಮತವನ್ನು ಪರಿಗಣಿಸಬಾರದಿತ್ತು ಎಂದು ಇತ್ಯರ್ಥ ಸೂತ್ರಕ್ಕೆ ವಿರೋಧ ದಾಖಲಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಐಡಿಬಿಐ ಟ್ರಸ್ಟಿಶಿಪ್‌ ಸರ್ವಿಸಸ್ (ಎಡೆಲ್ವೀಸ್‌ ಮತ್ತು ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಫಂಡ್ಸ್‌ ಪ್ರತಿನಿಧಿ) ವಾದಿಸಿವೆ.

ಎನ್‌ಸಿಎಲ್‌ಟಿ ಆದೇಶಕ್ಕೆ ಮೇಲ್ಮನವಿ ಸಲ್ಲಿಸುವ ಆಲೋಚನೆ ಇದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಈಗಾಗಲೇ ಹೇಳಿದೆ. ಎನ್‌ಸಿಎಲ್‌ಟಿ ಆದೇಶ ಪ್ರಶ್ನಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ಯಲ್ಲಿ (ಎನ್‌ಸಿಎಲ್‌ಎಟಿ) ಅರ್ಜಿ ಸಲ್ಲಿಸಲಾಗುತ್ತದೆ ಎಂದು ಕೆನರಾ ಬ್ಯಾಂಕ್‌ ಕೂಡ ಹೇಳಿದೆ.

ಚಂದ್ರ ಅವರು ಪ್ರಸ್ತಾಪಿಸಿದ್ದ ಇತ್ಯರ್ಥ ಸೂತ್ರಕ್ಕೆ ಎನ್‌ಸಿಎಲ್‌ಟಿ ದ್ವಿಸದಸ್ಯ ಪೀಠವು ಭಿನ್ನ ಆದೇಶ ಪ್ರಕಟಿಸಿತ್ತು. ನಂತರ ಅದನ್ನು ಮೂರನೆಯ ಸದಸ್ಯ ನಿಲೇಶ್ ಶರ್ಮಾ ಅವರಿಗೆ ವರ್ಗಾವಣೆ ಮಾಡಲಾಯಿತು. ಶರ್ಮಾ ಅವರು ಇತ್ಯರ್ಥ ಸೂತ್ರದ ಪರವಾಗಿ ಆದೇಶಿಸಿದರು. ಇದರ ಪ್ರಕಾರ ಚಂದ್ರ ಅವರು, ಸಾಲದಾತರು ಕೇಳುತ್ತಿರುವ ₹22,006 ಕೋಟಿಯ ಬದಲಾಗಿ ₹6.5 ಕೋಟಿ ಪಾವತಿಸಿ ಇತ್ಯರ್ಥ ಮಾಡಿಕೊಳ್ಳಬೇಕಿದೆ.

ಇತ್ಯರ್ಥ ಸೂತ್ರಕ್ಕೆ ಸಹಮತ ವ್ಯಕ್ತ ಪಡಿಸದೆ ಇದ್ದ ಎನ್‌ಸಿಎಲ್‌ಟಿ (ತಾಂತ್ರಿಕ) ಸದಸ್ಯರಾದ ರೀನಾ ಸಿನ್ಹಾ ಪುರಿ ಅವರು, ಇತ್ಯರ್ಥ ಅಧಿಕಾರಿಯ (ಆರ್‌.‍ಪಿ) ನಡೆಯನ್ನು ಪ್ರಶ್ನಿಸಿದ್ದರು. ಅಧಿಕಾರಿಯು ದಿವಾಳಿ ಸಂಹಿತೆಯ ಸೆಕ್ಷನ್ 106(4) ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದರು.

ಪ್ರಕರಣದ ಬಗ್ಗೆ ಸ್ಪಷ್ಟನೆಯೊಂದನ್ನುನೀಡಿರುವ ಚಂದ್ರ ಅವರು, ವೈಯಕ್ತಿಕವಾಗಿ ತಮ್ಮ ವಿರುದ್ಧ ಇದ್ದ ದಿವಾಳಿ ಪ್ರಕರಣದಲ್ಲಿನ ಕ್ಲೇಮ್‌ ಮೊತ್ತವು ₹3,992 ಕೋಟಿ ಮಾತ್ರ ಎಂದು ಹೇಳಿದ್ದಾರೆ. ಇದಕ್ಕೆ ತಾವು ವೈಯಕ್ತಿಕ ಖಾತರಿದಾರ ಮಾತ್ರ, ಸಾಲಗಾರ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

ಸಾಲ ಪಡೆದ ವ್ಯಕ್ತಿಯು ವೈಯಕ್ತಿಕವಾಗಿ ಶೇ 51ರಷ್ಟು ಅಥವಾ ಅದಕ್ಕಿಂತ ಹೆಚ್ಚು ಷೇರು ಹೊಂದಿರುವ ಅಥವಾ ನೇರವಾಗಿ, ಪರೋಕ್ಷವಾಗಿ ಆಡಳಿತ ಮಂಡಳಿಯನ್ನು ನಿಯಂತ್ರಿ ಸುತ್ತಿರುವ ಸಂದರ್ಭದಲ್ಲಿ ಮಾತ್ರ ಆ ಕಂಪನಿಗಳು 'ಸಹವರ್ತಿಗಳು' ಎಂದು ಪರಿಗಣಿತವಾಗುತ್ತವೆ ಎಂದು ನಿಲೇಶ್ ಶರ್ಮಾ ಅವರು ಆದೇಶದಲ್ಲಿ ವಿವರಿಸಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries