ಕೋಲ್ಕತ್ತ: 'ಅನ್ಯಾಯವೂ ದೀರ್ಘವಾಗಿರಬಹುದು, ಶಾಶ್ವತವಲ್ಲ; ಮಹಿಳೆಯರ ಹಕ್ಕು, ವಾಕ್ ಸ್ವಾತಂತ್ರ್ಯದ ಕುರಿತು ನಿರಂತರ ಹೋರಾಟ ನಡೆಸಲಿದ್ದೇನೆ' ಎಂದು ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದಾರೆ.
19 ವರ್ಷದ ನಂತರ ಕೋಲ್ಕತ್ತಕ್ಕೆ ಹಿಂತಿರುಗಿದ ಬಳಿಕ ಮೂಲಭೂತವಾದಿ ವಿರೋಧಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರಕ್ಕೆ ಮತ್ತೆ ಮರಳಿರುವುದು ಇಲ್ಲಿ ಬಿಟ್ಟುಹೋದ ಜೀವನದ ಒಂದು ಭಾಗಕ್ಕೆ ಮತ್ತೆ ಮರಳಬೇಕು ಎಂದು ಅನ್ನಿಸುತ್ತಿದೆ' ಎಂದು ತಿಳಿಸಿದ್ದಾರೆ.
ಸೂಕ್ತ ಭದ್ರತೆ: 'ಪಶ್ಚಿಮ ಬಂಗಾಳದಿಂದ ಗಡಿಪಾರು ಆಗಿದ್ದ ಲೇಖಕಿ ತಸ್ಲೀಮಾ ನಸ್ರೀನ್ ಅವರು 19 ವರ್ಷಗಳ ಬಳಿಕ ರಾಜ್ಯಕ್ಕೆ ಮರಳಿರುವುದು ವಾಕ್ ಸ್ವಾತಂತ್ರ್ಯದ ಪುನರ್ ಸ್ಥಾಪನೆಯ ಸಂಕೇತವಾಗಿದೆ. ರಾಜ್ಯಕ್ಕೆ ಯಾವುದೇ ಸಂದರ್ಭದಲ್ಲಿಯೂ ಭೇಟಿ ನೀಡಿದರೂ ಕೂಡ ಸೂಕ್ತ ಭದ್ರತೆ ವ್ಯವಸ್ಥೆ ಮಾಡಲಾಗುವುದು' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಭರವಸೆ ನೀಡಿದ್ದಾರೆ.
'2007ರಲ್ಲಿ ನಸ್ರೀನ್ ಅವರನ್ನು ಬಲವಂತವಾಗಿ ಕೋಲ್ಕತ್ತದಿಂದ ಹೊರಗೆ ಕಳುಹಿಸಲಾಗಿತ್ತು. ರಾಜ್ಯವು ವಾಕ್ ಸ್ವಾತಂತ್ರ್ಯ ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಯುಗವನ್ನು ಮತ್ತೆ ಪ್ರವೇಶಿಸಿದೆ' ಎಂದು ತಿಳಿಸಿದ್ದಾರೆ.
'ನೀವು ಯಾವಾಗ ಬೇಕಾದರೂ ಬಂಗಾಳಕ್ಕೆ ಭೇಟಿ ನೀಡಬಹುದು. ಪೊಲೀಸ್ ಇಲಾಖೆಯೂ ನಿಮಗೆ ಭದ್ರತೆ ಒದಗಿಸಲಿದೆ. ಇದು ಸಂಕೋಲೆಗಳು ಹಾಗೂ ಭಯದಿಂದ ಮುಕ್ತವಾದ ಬಂಗಾಳವಾಗಿದೆ. ಸಂವಿಧಾನದ ಪ್ರತಿ ಸ್ತಂಭವನ್ನು ರಕ್ಷಿಸಲಾಗುತ್ತಿದೆ. ಪ್ರತಿಯೊಬ್ಬರು ರಾಜ್ಯಕ್ಕೆ ಭೇಟಿ ನೀಡಿ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾಗಿದೆ' ಎಂದು ಸುವೇಂದು ಭರವಸೆ ನೀಡಿದ್ದಾರೆ.

