ಗುವಾಹಟಿ: ನೀರ್ಗಲ್ಲುಗಳ ಕುಸಿತವೇ ನೇಪಾಳದಲ್ಲಿ ಭೀಕರ ಪ್ರವಾಹಕ್ಕೆ ಕಾರಣಎಂಬ ವರದಿಯಿಂದ ಎಚ್ಚೆತ್ತುಕೊಂಡ ತಂತ್ರಜ್ಞರ ವಿಶೇಷ ತಂಡವು, ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಖಾಂಗ್ರಿ ನೀರ್ಗಲ್ಲುಗಳ ಪರಿಶೀಲನೆಗೆ ಮುಂದಾಗಿದೆ.
ಈ ಪ್ರದೇಶವು 16 ಸಾವಿರ ಅಡಿಗೂ ಹೆಚ್ಚು ಎತ್ತರವಿದ್ದು, ಅಸಂಖ್ಯಾತ ಹಿಮ ಸರೋವರಗಳು ಮತ್ತು ಪೂರ್ವ ಹಿಮಾಲಯದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ. ಈ ಸಂಕೀರ್ಣ ನೀರ್ಗಲ್ಲಿನ ಕುರಿತ ವೈಜ್ಞಾನಿಕ ಅರಿವು ಸೀಮಿತವಾಗಿದೆ.
'ಹಿಮ ಸರೋವರಗಳಲ್ಲಿನ ನೀರಿನಪ್ರಮಾಣ, ಆಳ, ಅಣೆಕಟ್ಟಿನ ಸ್ಥಿರತೆ, ನೀರಿನ ಮಟ್ಟವನ್ನು ತಗ್ಗಿಸುವ ಮಾರ್ಗ,ಹಿಮ ಸರೋವರ ಒಡೆದರೆ ಅಥವಾ ಭೂಕುಸಿತ ಉಂಟಾದಾಗ ಎದುರಾಗುವ ಪರಿಣಾಮವನ್ನು ತಗ್ಗಿಸಲು ಭೂರಚನೆ ನಕ್ಷೆ ತಯಾರಿಸುವುದು ಈ ಸಮೀಕ್ಷೆಯ ಉದ್ದೇಶವಾಗಿದೆ' ಎಂದು ಮೂಲಗಳು ತಿಳಿಸಿವೆ.
ಐಐಟಿ ಸೇರಿದಂತೆ ಹಲವು ಸಂಸ್ಥೆಗಳ ತಜ್ಞರನ್ನು ಒಳಗೊಂಡ ತಂಡವು ಸೆಪ್ಟೆಂಬರ್‌ನಲ್ಲೇ ತಂಡವು ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಲಾಗಿದೆ.
'ಈ ಸಮೀಕ್ಷೆಯು ನೀರ್ಗಲ್ಲುಗಳ ವಿಕಾಸ ಮತ್ತು ಅದಕ್ಕೆ ಸಂಬಂಧಿಸಿದ ಅಪಾಯಗಳ ಕುರಿತು ನಮ್ಮ ತಿಳಿವಳಿಕೆ ಯನ್ನು ಹೆಚ್ಚಿಸುವುದಲ್ಲದೆ, ದತ್ತಾಂಶದ ಕೊರತೆಯಿರುವ ಪೂರ್ವ ಹಿಮಾಲಯ ಪ್ರದೇಶದಲ್ಲಿ ಸೂಕ್ತ ಮಾಹಿತಿಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಲಿದೆ' ಎಂದು ಹೇಳಿದರು.

