ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾಗಿ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ, ಇರಾನ್‌ನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಅವರು ಭಾನುವಾರ ಮುಸ್ಲಿಂ ದೇಶಗಳಿಗೆ ಲಿಖಿತ ಸಂದೇಶವೊಂದನ್ನು ರವಾಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವಂತೆ ಅವರು ಕರೆ ನೀಡಿದ್ದಾರೆ.
ಫೆಬ್ರುವರಿ 28ರಂದು ಆರಂಭವಾದ ಯುದ್ಧದಲ್ಲಿ, ಇರಾನ್ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾದ ಬಳಿಕ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಬಾ ಖಮೇನಿ, ಈವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಜತೆಗೆ ಇರಾನ್ ಆಡಳಿತವು ಅವರ ಯಾವುದೇ ವಿಡಿಯೊ ಅಥವಾ ಆಡಿಯೊ ತುಣುಕನ್ನು ಬಿಡುಗಡೆ ಮಾಡಿಲ್ಲ.
ಪ್ರವಾದಿ ಮಹಮ್ಮದ್ ಅವರ ಜನ್ಮದಿನದ ಸಂದರ್ಭದಲ್ಲಿ ಹೊರಡಿಸಿದ ಸಂದೇಶದಲ್ಲಿ, 'ಇಸ್ಲಾಮಿಕ್ ರಾಷ್ಟ್ರಗಳ ಸಮಸ್ಯೆಗಳಿಗೆ ಪರಸ್ಪರ ಐಕ್ಯತೆ, ಸ್ನೇಹ ಮತ್ತು ಒಳಿತಿನ ಹಾದಿಯಲ್ಲಿ ಸಹಕಾರ ನೀಡುವುದೇ ಏಕೈಕ ಪರಿಹಾರ' ಎಂದು ಖಮೇನಿ ಹೇಳಿದ್ದಾರೆ.
ಮುಂದುವರಿದು, 'ಯಾವುದೇ ವ್ಯಕ್ತಿ ತಿಳಿದೋ ತಿಳಿಯದೆಯೋ ಮುಸ್ಲಿಂ ಸಮುದಾಯದಲ್ಲಿ ಭಿನ್ನಾಭಿಪ್ರಾಯ ಅಥವಾ ಸಂಘರ್ಷವನ್ನು ಸೃಷ್ಟಿಸಿದರೆ, ಅವರು ಇಸ್ಲಾಂನ ಶತ್ರುಗಳ ಉದ್ದೇಶಕ್ಕೆ ನೆರವಾದಂತೆ' ಎಂದೂ ಅವರು ಎಚ್ಚರಿಸಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಈ ಪ್ರದೇಶದ (ಪಶ್ಚಿಮ ಏಷ್ಯಾ) ದೇಶಗಳ ಆಡಳಿತಗಾರರು/ಮುಖ್ಯಸ್ಥರು ತಮ್ಮ ನಿಜವಾದ ಶತ್ರುವನ್ನು ಗುರುತಿಸಬೇಕು. ಅವರ ಸಂಚನ್ನು ಅರ್ಥಮಾಡಿಕೊಂಡು ಎದುರಿಸಬೇಕು' ಎಂದೂ ಕರೆ ನೀಡಿದ್ದಾರೆ.
ಇರಾನ್‌ನ ಅಧಿಕಾರಿಗಳು ಮತ್ತು ನಾಗರಿಕರು ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಒಂದಾಗಬೇಕೆಂದು ಅವರು ಮನವಿ ಮಾಡಿದ್ದಾರೆ. ಸಾಮಾಜಿಕ ಐಕ್ಯತೆಗೆ ಧಕ್ಕೆ ತರುವ ಯಾವುದೇ ಕೆಲಸವನ್ನು ಮಾಡಬಾರದು ಎಂದೂ ಅವರು ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.
ಯುದ್ಧದ ಸಮಯದಲ್ಲಿ, ಇರಾನ್ ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಕುವೈತ್, ಕತಾರ್ ಮತ್ತು ಬಹ್ರೇನ್ ಸೇರಿದಂತೆ ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿತ್ತು. ಇದರಿಂದಾಗಿ ಈ ರಾಷ್ಟ್ರಗಳೊಂದಿಗಿನ ಇರಾನ್ ಸಂಬಂಧ ಹದಗೆಟ್ಟಿದೆ.

