ದೋಹಾ: ಮಾರ್ಚ್ ನಲ್ಲಿ ಖತರ್ ನಲ್ಲಿರುವ ಸೇನಾ ನೆಲೆಯೊಂದರ ವಿರುದ್ಧ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಮೂವರು ಇರಾನಿನ ಪೈಲಟ್ ಗಳನ್ನು ಬಂಧಿಸಲಾಗಿದೆ ಎಂಬ ಇರಾನ್ ನ ಹೇಳಿಕೆಯನ್ನು ಖತರ್ ಶನಿವಾರ ತಳ್ಳಿಹಾಕಿದೆ. ಮೂವರು ಪೈಲಟ್‌ಗಳು ತನ್ನ ವಶದಲ್ಲಿಲ್ಲ; ಆ ಪೈಕಿ ಒಬ್ಬ ಪೈಲಟ್‌ನ ಅವಶೇಷ ಪತ್ತೆಯಾಗಿದೆ ಎಂದು ಖತರ್ ನ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮಾರ್ಚ್‌ನಲ್ಲಿ ಇರಾನಿನ ಪೈಲಟ್‌ಗಳು ಖತರ್ ನ ವಾಯುಪ್ರದೇಶವನ್ನು ಉಲ್ಲಂಘಿಸಿದ್ದರು. ಅವರನ್ನು ಸಂಪರ್ಕಿಸಲು ಖತರ್ ಅಧಿಕಾರಿಗಳು ಹಲವು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಸಚಿವಾಲಯದ ವಕ್ತಾರರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಬಳಿಕ ಖತರ್ ನ ಶೋಧ ಮತ್ತು ರಕ್ಷಣಾ ತಂಡಗಳು ಪೈಲಟ್‌ಗಳಿಗಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಒಬ್ಬರ ಅವಶೇಷ ಪತ್ತೆಯಾಯಿತು. ಅವಶೇಷಗಳನ್ನು ಇರಾನ್ ಗೆ ಹಸ್ತಾಂತರಿಸುವ ವ್ಯವಸ್ಥೆಗಾಗಿ ಖತರ್ ಇರಾನ್ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಆದರೆ, ಕಾರ್ಯಾಚರಣೆಯ ವಿವರಗಳನ್ನು ಪರಿಶೀಲಿಸಲು ಖತರ್ ನೀಡಿದ ಆಹ್ವಾನಕ್ಕೆ ಟೆಹ್ರಾನ್ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ವಕ್ತಾರರು ಹೇಳಿದ್ದಾರೆ.
ಇರಾನ್ ಹೇಳಿದ್ದೇನು?
ಇದಕ್ಕೂ ಮೊದಲು ಇರಾನ್ ನ ಸರ್ಕಾರಿ ಸುದ್ದಿ ಸಂಸ್ಥೆ IRNA, ಹಿರಿಯ ಸೇನಾ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ, ಖತರ್ ನಲ್ಲಿರುವ ಸೇನಾ ನೆಲೆಯೊಂದರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಮೂವರು ಇರಾನಿನ ಪೈಲಟ್ ಗಳನ್ನು ಖತರ್ ಪಡೆಗಳು ಜೀವಂತವಾಗಿ ಸೆರೆ ಹಿಡಿದಿವೆ ಎಂದು ವರದಿ ಮಾಡಿತ್ತು.
ಇರಾನ್ ನ ಪ್ರಕಾರ, ಮಾರ್ಚ್ ನಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಇರಾನಿನ ಯುದ್ಧವಿಮಾನಗಳು ಡಿಕ್ಕಿಯಾಗಿದ್ದವು. ಈ ವೇಳೆ ಪೈಲಟ್‌ಗಳು ತಮ್ಮ ಯುದ್ಧವಿಮಾನಗಳಿಂದ ಹೊರಗೆ ಹಾರಿದ್ದರು. ಬಳಿಕ ಅವರನ್ನು ಖತರ್ ಪಡೆಗಳು ಜೀವಂತವಾಗಿ ಬಂಧಿಸಿದ್ದವು ಎಂದು ಇರಾನ್ ಹೇಳಿದೆ.
ಪೈಲಟ್ ಗಳ ಮುಂದಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲು ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ (ICRC) ಮಧ್ಯಪ್ರವೇಶಿಸಬೇಕು ಎಂದು ಇರಾನಿನ ಅಧಿಕಾರಿ ಮನವಿ ಮಾಡಿದ್ದರು.
ಇರಾನ್ ನ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಕೂಡ ಶನಿವಾರ ಫಾರ್ಸ್ ಸುದ್ದಿ ಸಂಸ್ಥೆ ಪ್ರಕಟಿಸಿದ ಪ್ರಕಟನೆಯಲ್ಲಿ, ಖತರ್ ಬಂಧಿಸಿದೆ ಎಂದು ಹೇಳಲಾಗಿರುವ ಮೂವರು ಇರಾನಿನ ಪೈಲಟ್ ಗಳ ಬಿಡುಗಡೆಗೆ ನೆರವಾಗುವಂತೆ ICRCಗೆ ಮನವಿ ಮಾಡಿದೆ.
ಸಂಘರ್ಷದ ಹಿನ್ನೆಲೆ
ಫೆಬ್ರುವರಿ 28ರಂದು ಆರಂಭವಾದ ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಇರಾನ್ ಪ್ರತಿಕ್ರಿಯಿಸುತ್ತಿದ್ದ ಸಂದರ್ಭದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಗಲ್ಫ್ ಅರಬ್ ರಾಷ್ಟ್ರಗಳಲ್ಲಿರುವ ಸೇನಾ ನೆಲೆಗಳನ್ನು ಅಮೆರಿಕ ಮತ್ತು ಇಸ್ರೇಲ್ ಬಳಸುತ್ತಿವೆ ಎಂದು ಟೆಹ್ರಾನ್ ಆರೋಪಿಸಿತ್ತು.
ಇರಾನಿನ ಪೈಲಟ್‌ಗಳು ತನ್ನ ವಾಯುಪ್ರದೇಶ ಪ್ರವೇಶಿಸಿದ ಬಳಿಕ ಅವರೊಂದಿಗೆ ಸಂಪರ್ಕ ಸಾಧಿಸಲು ಹಲವು ಬಾರಿ ಪ್ರಯತ್ನಿಸಲಾಗಿತ್ತು. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತನ್ನ ಪ್ರದೇಶವನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಯಿತು ಎಂದು ಖತರ್ ಹೇಳಿದೆ.
ಅಮೆರಿಕ-ಇಸ್ರೇಲ್ ದಾಳಿಗಳು ಬಳಿಕ ವ್ಯಾಪಕ ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾದವು. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ ನ ನೆಲೆಗಳು ಹಾಗೂ ಕೊಲ್ಲಿ ರಾಷ್ಟ್ರಗಳಾದ್ಯಂತ ಇರುವ ಅಮೆರಿಕದ ಸೇನಾ ಸೌಲಭ್ಯಗಳ ಮೇಲೆ ದಾಳಿ ನಡೆಸಿತು.

