ಪುಣೆ (PTI): ವೈಯಕ್ತಿಕ ಹಿತಾಸಕ್ತಿಯನ್ನು ಮೀರಿ ದೇಶದ ಹಿತಕ್ಕಾಗಿ ಯುವಜನರು ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಕರೆ ನೀಡಿದರು.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಲಕ್ ಸ್ಮಾರಕ ಟ್ರಸ್ಟ್ ನೀಡುವ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, 'ಸದೃಢ ದೇಶ ನಿರ್ಮಾಣಕ್ಕಾಗಿ ಭಾರತದ ಎದುರಿಗಿರುವ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು' ಎಂದರು.
'ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂಥ ನಾಯಕರನ್ನು ಹೊಂದಿರುವುದು ಈ ದೇಶದ ಅದೃಷ್ಟ' ಎಂದು ಅವರು ಅಭಿಪ್ರಾಯಪಟ್ಟರು.
'ನಮ್ಮ ದೇಶದ ಇತಿಹಾಸದಲ್ಲಿ ಅವಕಾಶದ ಕಿಟಕಿ ಇದೆ. ಅದನ್ನು ನಾವು ಕಳೆದುಕೊಳ್ಳಬಾರದು. ರಾಷ್ಟ್ರ ನಿರ್ಮಾಣವೇ ನಮ್ಮ ಈ ಹೊತ್ತಿನ ಧ್ಯೇಯ ಮತ್ತು ಇದರಲ್ಲಿ ಯಶಸ್ವಿಯಾಗಿ, ಇತಿಹಾಸದ ಪುಸ್ತಕದಲ್ಲಿ ಹೊಸ ಅಧ್ಯಾಯವನ್ನು ಬರೆಯಬೇಕು. ವೈಯಕ್ತಿಕ, ಕ್ಷಣಿಕ ಸುಖವನ್ನು ತ್ಯಜಿಸಿ, ದೇಶಕ್ಕಾಗಿ ಸಮರ್ಪಿಸಿಕೊಳ್ಳುವ ದೃಢನಿಶ್ಚಯ ಮಾಡಬೇಕು' ಎಂದರು.
'ಸಮರ್ಥ ವಿದೇಶಾಂಗ ನೀತಿಯಲ್ಲಿ ಡೊಭಾಲ್ ಪಾತ್ರ ಮುಖ್ಯ'
'ಭಾರತದ ವಿದೇಶಾಂಗ ನೀತಿಗಳನ್ನು ಬಲಗೊಳಿಸುವಲ್ಲಿ ಹಾಗೂ ದೇಶದ ರಕ್ಷಣಾ ಸಾಮರ್ಥ್ಯದಲ್ಲಿ ಪರಿಣಾಮಕಾರಿ ಬದಲಾವಣೆ ತರುವಲ್ಲಿ ಅಜಿತ್ ಡೊಭಾಲ್ ಅವರು ಗಮನಾರ್ಹ ಪಾತ್ರ ವಹಿಸಿದ್ದಾರೆ' ಎಂದು ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದರು.

