ನವದೆಹಲಿ: ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನ ದಿಢೀರ್ 300 ಅಡಿ ಕುಸಿದ ಪ್ರಕರಣಕ್ಕೆ ಸಂಬಂಧಿಸಿ ಪೈಲಟ್ ಗಾಂಜಾ ಸೇವಿಸಿರುವುದು ದೃಢಪಟ್ಟ ಬೆನ್ನಲ್ಲೇ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಎಲ್ಲ ಪೈಲಟ್‌ಗಳಿಗೆ ಉದ್ದೀಪನ ಪರೀಕ್ಷೆ ನಡೆಸಲು ನಿರ್ಧರಿಸಿದೆ.
ಚಾಲ್ತಿಯಲ್ಲಿರುವ ನಿಯಮಗಳಡಿ ನಿರ್ಬಂಧಿಸಲಾದ ವಸ್ತುಗಳು ಅಥವಾ ಔಷಧಗಳ ಸೇವನೆಯ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೈಲಟ್‌ಗಳಿಗೆ ಕಳುಹಿಸಲಾಗಿರುವ ಆಂತರಿಕ ಸಂದೇಶದಲ್ಲಿ ತಿಳಿಸಲಾಗಿದೆ. ಗುರುವಾರದಿಂದ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗುರುಗ್ರಾಮ ಅಕಾಡೆಮಿಯಲ್ಲಿ ತರಬೇತಿಯ ಜೊತೆಗೆ ಪರೀಕ್ಷೆ ನಡೆಸಲಾಗುತ್ತದೆ ಹಾಗೂ ವಿಮಾನ ಸಂಚಾರದ ಬಳಿಕ ಪರಿಶೀಲನಾ ಕೇಂದ್ರ, ವಿಮಾನಯಾನ ಸಂಸ್ಥೆಯ ಕಚೇರಿ ಅಥವಾ ಲಭ್ಯವಾದ ನೆಲೆಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ.
ಟಾಟಾ ಸಮೂಹ ಒಡೆತನದ ಈ ಎರಡು ವಿಮಾನಯಾನ ಸಂಸ್ಥೆಗಳಲ್ಲಿ 5 ಸಾವಿರಕ್ಕೂ ಅಧಿಕ ಪೈಲಟ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

