ವಾಷಿಂಗ್ಟನ್:ಇರಾನ್ ಮೇಲಿನ ಬೃಹತ್ ಮಿಲಿಟರಿ ದಾಳಿ ಯೋಜನೆಯನ್ನು ಕೈಬಿಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೋಮವಾರದಿಂದಲೇ ಮಧ್ಯಸ್ಥಿಕೆದಾರರ ಮೂಲಕ ಇರಾನ್ ಜೊತೆ ದ್ವಿಪಕ್ಷೀಯ ಮಾತುಕತೆಗಳು ಪುನರಾರಂಭಗೊಳ್ಳಲಿವೆ ಎಂದು ಘೋಷಿಸಿದ್ದಾರೆ.
ಏರ್ ಫೋರ್ಸ್ ಒನ್ ವಿಮಾನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, 'ಇರಾನ್ ಜೊತೆಗಿನ ಮಾತುಕತೆ ಸಕ್ರಿಯವಾಗಿವೆ' ಎಂದು ಸ್ಪಷ್ಟಪಡಿಸಿದ್ದಾರೆ.
'ಸೋಮವಾರ ಮಧ್ಯಾಹ್ನದಿಂದ ಈ ಪ್ರಕ್ರಿಯೆ ಆರಂಭವಾಗಲಿದ್ದು, ಫಲಿತಾಂಶ ಏನು ಎಂಬುದನ್ನು ಕಾದು ನೋಡಬೇಕಿದೆ. ಒಪ್ಪಂದ ಮಾಡಿಕೊಳ್ಳುವುದು ನನಗೆ ಇಷ್ಟ. ಇದರಿಂದ ಅನೇಕ ಜೀವಗಳು ಉಳಿಯುತ್ತವೆ ಮತ್ತು ಅನಗತ್ಯ ಶಕ್ತಿಪ್ರದರ್ಶನ ತಪ್ಪುತ್ತದೆ. ಜೀವಹಾನಿ ಮಾಡುವುದು ನನ್ನ ಉದ್ದೇಶವಲ್ಲ' ಎಂದು ಟ್ರಂಪ್ ಹೇಳಿದ್ದಾರೆ.
ಈ ಮಾತುಕತೆಯಲ್ಲಿ ಜಾಗತಿಕ ಇಂಧನ ಪೂರೈಕೆ ಸರಪಳಿಯ ಪ್ರಮುಖ ಜಲಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟು ಬಗೆಹರಿಸುವುದು ಹಾಗೂ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಗಳನ್ನು ನಿಷ್ಕ್ರಿಯಗೊಳಿಸುವುದು ಪ್ರಮುಖವಾಗಿ ಚರ್ಚಿಸಲಾಗುವುದು ಎಂದು ಟ್ರಂಪ್ ಭಾನುವಾರ ತಿಳಿಸಿದ್ದರು.

