ಢಾಕಾ: ಹೊಸದಿಲ್ಲಿಯಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಾಧ್ಯಮಗಳೊಂದಿಗೆ ನೇರ ಸಂವಾದ ನಡೆಸಲು ಅವಕಾಶ ನೀಡಿರುವುದಕ್ಕೆ ಬಾಂಗ್ಲಾದೇಶ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಪುನರ್‌ನಿರ್ಮಾಣದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ, ಹಸೀನಾ ಮತ್ತು ಅವರ ಬೆಂಬಲಿಗರು ಮಾಧ್ಯಮ ಸಂವಾದದಲ್ಲಿ ಬಾಂಗ್ಲಾದೇಶ ಹಾಗೂ ಜನರ ವಿರುದ್ಧ ವಿಷಪೂರಿತ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದೆ.
ಈ ಕಾರ್ಯಕ್ರಮದಿಂದ ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ಧಕ್ಕೆಯಾಗಬಹುದು ಎಂಬ ಕಳವಳವನ್ನು ಭಾರತ ಸರಕಾರಕ್ಕೆ ಮೊದಲೇ ತಿಳಿಸಲಾಗಿತ್ತು. ಆದರೂ ಕಾರ್ಯಕ್ರಮಕ್ಕೆ ಅವಕಾಶ ನೀಡಿರುವುದು ಅತ್ಯಂತ ವಿಷಾದನೀಯ ಎಂದು ಸಚಿವಾಲಯ ಹೇಳಿದೆ.
ಬಾಂಗ್ಲಾದೇಶದ ಜನರು ಜುಲೈ ಕ್ರಾಂತಿಯ ಎರಡನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ದಿನವೇ ಭಾರತೀಯ ನೆಲದಲ್ಲಿ ಈ ಸಂವಾದ ನಡೆದಿರುವುದು ಬಾಂಗ್ಲಾದೇಶದ ಸಾರ್ವಭೌಮತ್ವಕ್ಕೆ ಮಾಡಿದ ಅವಮಾನ ಹಾಗೂ ಜುಲೈ ಕ್ರಾಂತಿಯ ಹುತಾತ್ಮರಿಗೆ ಮಾಡಿದ ಘೋರ ಅಪಮಾನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜುಲೈ-ಆಗಸ್ಟ್ 2024ರ ಅವಧಿಯಲ್ಲಿ ಅಪ್ರಾಪ್ತ ವಯಸ್ಕ ಮಕ್ಕಳು ಸೇರಿದಂತೆ ಮುಗ್ಧ ನಾಗರಿಕರ ಹತ್ಯೆಗಳ ಕುರಿತು ವಿಶ್ವಸಂಸ್ಥೆ ದೃಢಪಡಿಸಿರುವ ಸತ್ಯಗಳನ್ನು ಶೇಖ್ ಹಸೀನಾ ನಿರಾಕರಿಸುತ್ತಿರುವುದು ಇತಿಹಾಸವನ್ನು ತಿರುಚುವ ವ್ಯರ್ಥ ಪ್ರಯತ್ನವಾಗಿದೆ ಎಂದು ಬಾಂಗ್ಲಾದೇಶ ಆರೋಪಿಸಿದೆ. ಇಂತಹ ಪ್ರಯತ್ನಗಳನ್ನು ಬಾಂಗ್ಲಾದೇಶದ ಜನರು ಈ ಹಿಂದೆಯೂ ತಿರಸ್ಕರಿಸಿದ್ದು, ಈಗಲೂ ತಿರಸ್ಕರಿಸುತ್ತಿದ್ದಾರೆ ಎಂದು ಹೇಳಿದೆ.
ಜುಲೈ ಕ್ರಾಂತಿಯ ಚೈತನ್ಯವನ್ನು ಎತ್ತಿಹಿಡಿದಿರುವ ಬಾಂಗ್ಲಾದೇಶದ ಜನರು, ದೇಶವು ಮತ್ತೆ ಫ್ಯಾಸಿಸಂನ ದಿನಗಳಿಗೆ ಮರಳುವುದಿಲ್ಲ ಹಾಗೂ ಯಾವುದೇ ದೇಶದ ಅಧೀನ ರಾಷ್ಟ್ರವಾಗುವುದಿಲ್ಲ ಎಂಬ ದೃಢ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. ಶಿಕ್ಷೆಗೆ ಗುರಿಯಾದ ಶೇಖ್ ಹಸೀನಾ ಹಾಗೂ ಅವರ ರಾಜಕೀಯ ಜಾಲಕ್ಕೆ ಬಾಂಗ್ಲಾದೇಶದ ರಾಜಕೀಯದಲ್ಲಿ ಎಂದಿಗೂ ಸ್ಥಾನವಿರುವುದಿಲ್ಲ ಎಂದು ಹೇಳಿದೆ.
ಸಾರ್ವಭೌಮ ಸಮಾನತೆ, ಪರಸ್ಪರ ಗೌರವ, ಪರಸ್ಪರರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಹಾಗೂ ರಾಷ್ಟ್ರೀಯ ಘನತೆಯ ತತ್ವಗಳ ಆಧಾರದಲ್ಲಿ ಭಾರತದೊಂದಿಗೆ ರಚನಾತ್ಮಕ, ಪರಸ್ಪರ ಪ್ರಯೋಜನಕಾರಿ ಮತ್ತು ಭವಿಷ್ಯೋನ್ಮುಖ ಸಂಬಂಧವನ್ನು ಮುಂದುವರಿಸಲು ಬಾಂಗ್ಲಾದೇಶ ಬಯಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
2013ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಸಹಿ ಹಾಕಲಾದ ಹಸ್ತಾಂತರ ಒಪ್ಪಂದಡಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಭಾರತ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರಕಟನೆ ತಿಳಿಸಿದೆ. ಇದರ ನಡುವೆಯೇ ಅವರಿಗೆ ಭಾರತೀಯ ನೆಲದಲ್ಲಿ ಮಾಧ್ಯಮಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸಲು ಅವಕಾಶ ನೀಡಿರುವುದು ಬಾಂಗ್ಲಾದೇಶದ ಜನರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದ್ದು, ಉಭಯ ದೇಶಗಳ ನಡುವಿನ ಸಾಮರಸ್ಯದ ದ್ವಿಪಕ್ಷೀಯ ಸಂಬಂಧಗಳ ಬೆಳವಣಿಗೆಗೆ ಹಾನಿಕಾರಕವಾಗಿದೆ ಎಂದು ಆರೋಪಿಸಿದೆ.

