ಪಟ್ನಾ: ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿ ಸಂಚಲನ ಸೃಷ್ಟಿಸಿರುವ ಆರು ವರ್ಷದ ಬಾಲಕ ಬಿಹಾರದ ಅದಿತ್ಯ ಕುಮಾರ್, ತನ್ನ ಪೋಷಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಗರ್ದಾನಿಬಾಗ್ ಪ್ರದೇಶದಲ್ಲಿ ಭಾನುವಾರ ಧರಣಿ ನಡೆಸಿದ್ದಾನೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದೂ ಒತ್ತಾಯಿಸಿದ್ದಾನೆ.
ಬಿಹಾರ ಲೋಕಸೇವಾ ಆಯೋಗದ ಪರೀಕ್ಷಾ ಆಕಾಂಕ್ಷಿಗಳು ಆಗಸ್ಟ್ 25ರಂದು ಪ್ರತಿಭಟನೆ ನಡೆಸಿದ್ದರು. ಶಿಕ್ಷಕರ ನೇಮಕ ಪರೀಕ್ಷೆಯನ್ನು ಒಂದೇ ಹಂತದಲ್ಲಿ ನಡೆಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನಿವಾಸಕ್ಕೆ ಮುತ್ತಿಗೆ ಹಾಕುವುದು ಅವರ ಉದ್ದೇಶವಾಗಿತ್ತು. ಆ ಪ್ರತಿಭಟನೆಯಲ್ಲಿ ಅದಿತ್ಯ ಕುಮಾರ್ ಭಾಗವಹಿಸಿದ್ದ.
ಗರ್ದಾನಿಬಾಗ್ನಲ್ಲಿ ಧರಣಿ ನಡೆಸಿರುವ ಬಾಲಕ, 'ನನ್ನನ್ನು ಪೋಷಕರಿಂದ ಬೇರ್ಪಡಿಸಿ 8 ತಾಸು ವಶಕ್ಕೆ ಪಡೆದಿದ್ದ ಪೊಲೀಸರು, ಆ ಸಮಯದಲ್ಲಿ ನನ್ನ ಪೋಷಕರನ್ನು ಥಳಿಸಿದ್ದಾರೆ. ನನ್ನ ಪೋಷಕರು ಅಪರಾಧಿಗಳಲ್ಲ. ಹಾಗಿದ್ದ ಮೇಲೆ, ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಏಕೆ?' ಎಂದು ಕೇಳಿದ್ದಾನೆ.
ಎಲ್ಲ ಪಕ್ಷಗಳಿಗೆ ಸೇರಿದವರೂ ತನ್ನ ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿರುವ ಬಾಲಕ, ಪ್ರಧಾನಿ ಅವರು ತನ್ನನ್ನು ಭೇಟಿಯಾಗಿ ಕುಂದುಕೊರತೆಗಳನ್ನು ಆಲಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾನೆ.
'ನಾವು ಖಂಡಿತವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುತ್ತೇವೆ. ಚುನಾವಣೆ ಸಮಯದಲ್ಲಿ ರೋಡ್ಶೋ ನಡೆಸುವವರು, ಈಗ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ನಮ್ಮನ್ನು ಭೇಟಿಯಾಗಬೇಕು. ಅದು ಆಗುವವರೆಗೂ ನಾವು ಇಲ್ಲೇ ಪ್ರತಿಭಟನೆ ನಡೆಸುತ್ತೇವೆ' ಎಂದಿದ್ದಾನೆ.
ಧರಣಿ ಆರಂಭಿಸುವುದಕ್ಕೂ ಒಂದು ದಿನ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಾಲಕ, ಪೊಲೀಸರ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಆ ನಿಟ್ಟಿನಲ್ಲಿ ಬಿಹಾರ ಪೊಲೀಸ್ ಮಹಾನಿರ್ದೇಶಕ ವಿನಯ್ ಕುಮಾರ್ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದ್ದ.
'ಡಿಜಿಪಿ ಸರ್ ಅವರು ನ್ಯಾಯಾಂಗ ತನಿಖೆಗೆ ಆದೇಶಿಸುತ್ತಾರೆ ಎಂಬ ವಿಶ್ವಾಸವಿದೆ. ನ್ಯಾಯಾಂಗ ತನಿಖೆಗೆ ಆದೇಶಿಸದಿದ್ದರೆ ನಾನು ಧರಣಿ ಪ್ರಾರಂಭಿಸುತ್ತೇನೆ' ಎಂದು ಹೇಳಿದ್ದ.
ಅದಾದ ನಂತರ, 'ಬಾಲಕನನ್ನು ಸುರಕ್ಷತೆಯ ಕಾರಣಕ್ಕಾಗಿ ಠಾಣೆಯಲ್ಲಿ ಇರಿಸಿಕೊಂಡಿದ್ದೆವು. ನಂತರ, ಆತನ ತಾಯಿಗೆ ಒಪ್ಪಿಸಲಾಯಿತು' ಎಂದು ಪೊಲೀಸರು ತಿಳಿಸಿದ್ದರು.
'ಮನೆಗೆಲಸ ಮಾಡಿಕೊಂಡಿರುವ ತಾಯಿ ಮತ್ತು ದಿನಗೂಲಿ ನೌಕರನಾಗಿರುವ ತಂದೆಗೆ ಬಾಲಕನ ಬಗ್ಗೆ ಜಾಗರೂಕವಾಗಿರುವಂತೆ ನಾವು ಸಲಹೆ ನೀಡಿದ್ದೆವು. ಗಲಭೆ ನಡೆಯುತ್ತಿರುವ ಪ್ರದೇಶದಲ್ಲಿ ಮಗು ಹೊರಗೆ ಬರಲು ಅವರು ಬಿಡಬಾರದಿತ್ತು' ಎಂದೂ ಹೇಳಿದ್ದರು.

