ಕೈರೊ: ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವಂತೆ ಅಮೆರಿಕ ಒಂದೆಡೆ ಒತ್ತಾಯಿಸುತ್ತಿದ್ದರೆ, ಮತ್ತೊಂದೆಡೆ ಇರಾನ್ ಮೇಲಿನ ದಾಳಿ ತೀವ್ರಗೊಳಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಶುಕ್ರವಾರ ವರದಿಗಾರರೊಂದಿಗೆ ಮಾತನಾಡಿದ ಅವರು, 'ಇರಾನ್ನಲ್ಲಿ ನಾವು ಗೆಲುವನ್ನು ಮಾತ್ರ ಬಯಸುತ್ತೇವೆ. ಅವರು ಸಾಕು ಎನ್ನುವವರೆಗೂ ದಾಳಿ ನಡೆಸುತ್ತೇವೆ' ಎಂದಿದ್ದಾರೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೆರೋಲಿನ್ ಲೀವಿಟ್ ಮಾತನಾಡಿ, 'ಕಳೆದ ತಿಂಗಳು ಮಾಡಿಕೊಂಡ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದ ಇರಾನ್, ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡಿ ಅಮೆರಿಕ ಸೈನಿಕರನ್ನು ಹತ್ಯೆ ಮಾಡಿದೆ' ಎಂದರು.
'ಟ್ರಂಪ್ ಅವರ ಹೇಳಿಕೆ ಸರಿಯಾಗಿಯೇ ಇದೆ. ಇರಾನ್ನ ಭಯೋತ್ಪಾದಕ ಕೃತ್ಯವನ್ನು ನೋಡಿಕೊಂಡು ಸುಮ್ಮನೆ ಕೂರಲಾಗದು. ಶಾಂತಿ ಮಾತುಕತೆಗೆ ಬರುವವರೆಗೂ ಅವರ ಮೇಲೆ ದಾಳಿ ಮುಂದುವರಿಯುತ್ತದೆ' ಎಂದು ಹೇಳಿದ್ದಾರೆ.
ದಾಳಿಗೆ ಪ್ರತ್ಯುತ್ತರ- ಕುವೈತ್: 'ನಮ್ಮ ಮೇಲೆ ಇರಾನ್ ಡ್ರೋನ್ ದಾಳಿಯನ್ನು ಮುಂದುವರಿಸಿದೆ. ಅದಕ್ಕೆ ನಾವು ಪ್ರತ್ಯುತ್ತರ ನೀಡಿದ್ದೇವೆ' ಎಂದು ಕುವೈತ್ ಸೇನೆ ಶನಿವಾರ ತಿಳಿಸಿದೆ.
'ದೇಶದ ಉತ್ತರ ಭಾಗದಲ್ಲಿ ಸರ್ಕಾರಿ ಕಟ್ಟಡಗಳೂ ಸೇರಿದಂತೆ ಅನೇಕ ಮೂಲಸೌಕರ್ಯಗಳ ಮೇಲೆ ಡ್ರೋನ್ ದಾಳಿ ನಡೆದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ' ಎಂದು ತಿಳಿಸಿದೆ.
ವಿವಿಧೆಡೆ ಮುಂದುವರಿದ ದಾಳಿ: 'ಒಮಾನ್ ಕರಾವಳಿಯ ಬಳಿ ಹೊರ್ಮುಜ್ ಜಲಸಂಧಿಯಲ್ಲಿ ಹಡಗೊಂದರ ಸಮೀಪವೇ ಶುಕ್ರವಾರ ಸ್ಫೋಟ ಸಂಭವಿಸಿದ್ದು, ಎಂಜಿನ್ ಕೊಠಡಿಗೆ ಹಾನಿಯಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ' ಎಂದು ಬ್ರಿಟಿಷ್ ನೌಕಾಪಡೆ ತಿಳಿಸಿದೆ.
'ಬಾಬ್ ಎಲ್-ಮಂಡೆಬ್ ಜಲಸಂಧಿಯನ್ನು ಬಂದ್ ಮಾಡಿದ ಪರಿಣಾಮ ಸೌದಿಯ ಎಂಟು ಹಡಗುಗಳು ಕೇಪ್ ಆಫ್ ಗುಡ್ ಹೋಪ್ ಮಾರ್ಗದ ಮೂಲಕ ಸಂಚರಿಸಿವೆ' ಎಂದು ಇರಾನ್ ಬೆಂಬಲಿತ ಹೂಥಿ ಬಂಡುಕೋರರು ತಿಳಿಸಿದ್ದಾರೆ.
ಸುರಂಗ ಜಾಲ ಸ್ಫೋಟ: 'ದಕ್ಷಿಣ ಲೆಬನಾನ್ನಲ್ಲಿ ಹಿಜ್ಬುಲ್ಲಾ ಉಗ್ರರ ಕಮಾಂಡ್ ಸೆಂಟರ್ ಆಗಿ ಬಳಕೆ ಆಗುತ್ತಿದ್ದ, 12ನೇ ಶತಮಾನದಲ್ಲಿ ಕ್ರುಸೇಡರ್ಗಳು ನಿರ್ಮಿಸಿದ್ದ ಬ್ಯೂಫೋರ್ಟ್ ಕೋಟೆಯ ಕೆಳಗಿನ ಸುರಂಗ ಜಾಲವನ್ನು ಸ್ಫೋಟಿಸಿದ್ದೇವೆ' ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಅಲ್ ಶಕಿಫ್ ಎಂದೂ ಕರೆಯಲಾಗುವ ಈ ಕೋಟೆಯನ್ನು ಇಸ್ರೇಲ್ ಸೇನೆ ಮೇ ತಿಂಗಳಲ್ಲಿ ವಶಕ್ಕೆ ಪಡೆದಿತ್ತು. ಇಸ್ರೇಲ್ ವಿರೋಧದ ಹೊರತಾಗಿಯೂ ಈಚೆಗಷ್ಟೇ ಇದನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೂ ಸೇರಿಸಲಾಗಿತ್ತು.

