ವಡೋದರ: ಸೋಮವಾರ ನಡೆದ ಉಪ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ ಗುಜರಾತ್ ನ ಮಂಜಲ್ ಪುರ್ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ ಅಭ್ಯರ್ಥಿ ಸತೀಶ್ ಪಟೇಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಭಿಕಾಭಾಯಿ ರಾಬರಿಯವರನ್ನು ಸುಮಾರು 30,000ಕ್ಕೂ ಹೆಚ್ಚು ಮತಗಳಿಂದ ಪರಾಭವಗೊಳಿಸಿದ್ದಾರೆ.
ಚುನಾವಣಾ ಆಯೋಗದ ದತ್ತಾಂಶದ ಪ್ರಕಾರ, 20ನೇ ಸುತ್ತಿನ ಮತ ಎಣಿಕೆಯ ಮುಕ್ತಾಯದ ಬಳಿಕ, ಸತೀಶ್ ಪಟೇಲ್ 55,481 ಮತಗಳನ್ನು ಪಡೆದಿದ್ದರೆ, ರಾಬರಿ ಅವರು 24,851 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ. ಹೀಗಾಗಿ, ಬಿಜೆಪಿ ಅಭ್ಯರ್ಥಿ ಸತೀಶ್ ಪಟೇಲ್ ಅವರು 30,630 ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ.
ವಡೋದರದ ಮಕರ್ ಪುರ ಪ್ರದೇಶದಲ್ಲಿರುವ ಭವನ್ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಗೆ ಬಿಗಿ ಭದ್ರತಾ ವ್ಯವಸ್ಥೆಯ ನಡುವೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಂಡಿತು.
ಜುಲೈ 30ರಂದು ನಡೆದಿದ್ದ ಉಪ ಚುನಾವಣೆಯಲ್ಲಿ ಕೇವಲ ಶೇ. 37.5ರಷ್ಟು ಮತದಾನವಾಗಿತ್ತು.

