HEALTH TIPS

IAS ಜೀವನದ ಭಾಗವಷ್ಟೇ, ಬದುಕಲ್ಲ: ದಿಢೀರ್ ರಾಜೀನಾಮೆ ಬಗ್ಗೆ ದಿವ್ಯಾ ಹೇಳಿದ್ದಿಷ್ಟು

ಉತ್ತರ ಪ್ರದೇಶ ಕೆಡರ್‌ನ ಜನಪ್ರಿಯ ಹಾಗೂ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ 13 ವರ್ಷಗಳ ಸೇವಾ ಪಯಣಕ್ಕೆ ಸ್ವ ಇಚ್ಛೆಯಿಂದ ಪೂರ್ಣವಿರಾಮ ಹೇಳಿದ ದಿವ್ಯಾ, ಸಾಮಾಜಿಕ ಮಾಧ್ಯಮದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.


ಜೊತೆಗೆ 'ಐಎಎಸ್ ಹುದ್ದೆ ಎಂಬುದು ನನ್ನ ಜೀವನದ ಒಂದು ಭಾಗವಷ್ಟೇ ಹೊರತು, ಅದೇ ನನ್ನ ಇಡೀ ಬದುಕಲ್ಲ. ಯಾವುದೇ ಒತ್ತಡ ಅಥವಾ ದಿಢೀರ್ ನಿರ್ಧಾರದಿಂದ ಈ ಹುದ್ದೆಗೆ ರಾಜೀನಾಮೆ ನೀಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಹಾಗೂ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ಲಂಡನ್ ಉದ್ಯೋಗ, ಭಾರತಕ್ಕೆ ವಾಪಸ್ ಬಂದ ಸಂದರ್ಭ ಹಾಗೂ ಆಡಳಿತ ಸೇವೆಯಲ್ಲಿನ ಅನುಭವಗಳನ್ನು ಸ್ಮರಿಸಿಕೊಂಡಿದ್ದಾರೆ.

'ಇಂದು ನಾನು 13 ವರ್ಷಗಳ ನನ್ನ ಈ ಅವಿಸ್ಮರಣೀಯ ಪಯಣಕ್ಕೆ ಸ್ವಇಚ್ಛೆಯಿಂದ ವಿರಾಮ ನೀಡುತ್ತಾ, ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಐಎಎಸ್ ಹುದ್ದೆ ಎಂಬುದು ನನ್ನ ಜೀವನದ ಒಂದು ಭಾಗವಷ್ಟೇ ಹೊರತು, ಅದೇ ನನ್ನ ಇಡೀ ಬದುಕಲ್ಲ. ಯಾವುದೇ ಒತ್ತಡ ಅಥವಾ ದಿಢೀರ್ ನಿರ್ಧಾರದಿಂದ ತಾವು ಹುದ್ದೆಗೆ ರಾಜೀನಾಮೆ ನೀಡಿಲ್ಲ' ಎಂದಿದ್ದಾರೆ.

ಒಂದು ಸಾಮಾನ್ಯ ಕುಟುಂಬದಿಂದ ಬಂದ ನಾನು, ಜೀವನದಲ್ಲಿ ಒಂದು ಉತ್ತಮ ಹಾಗೂ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಕನಸು ಕಂಡಿದ್ದೆ. ಹಗಲು-ರಾತ್ರಿ ಶ್ರಮಪಟ್ಟು ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನಲ್ಲಿ ವ್ಯಾಸಂಗ ಮುಗಿಸಿದ ನಂತರ ಲಂಡನ್‌ನಲ್ಲಿ ಉನ್ನತ ಉದ್ಯೋಗವೂ ಸಿಕ್ಕಿತು. ಆದರೆ ಎಲ್ಲವನ್ನೂ ಗಳಿಸಿದ ಮೇಲೆಯೂ ಮನಸ್ಸಿನಲ್ಲೆಲ್ಲೋ ಒಂದು ಅಪೂರ್ಣತೆ ಕಾಡುತ್ತಿತ್ತು. ನನ್ನದೇ ದೇಶದಲ್ಲಿ ನಾನಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು' ಎಂದಿದ್ದಾರೆ.

'ನನ್ನ ಶಿಕ್ಷಣ, ನನ್ನ ಆತ್ಮವಿಶ್ವಾಸ ಮತ್ತು ಪ್ರಪಂಚದಲ್ಲಿ ಎಲ್ಲಿಗೆ ಹೋದರೂ ತಲೆ ಎತ್ತಿ ನಡೆಯುವ ಧೈರ್ಯ. ಇವೆಲ್ಲವೂ ಭಾರತದ ಮಣ್ಣು ನನಗೆ ನೀಡಿತ್ತು. ಆ ಋಣವನ್ನು ನಾನು ತೀರಿಸಬೇಕಿತ್ತು. ನಾನು ಕನಸು ಕಂಡ ಭಾರತದಲ್ಲಿ ಇಟ್ಟಿಗೆಗಳ ಮೇಲೆ ನನ್ನ ಕೈಗಳ ಗುರುತುಗಳೂ ಇರಬೇಕೆಂದು ಬಯಸಿದ್ದೆ.

'ಭಾರತವನ್ನು ಕಟ್ಟುವ ಕನಸು ನನ್ನದಾಗಿತ್ತು. ಅದಕ್ಕಾಗಿ ಭಾರತಕ್ಕೆ ಮರಳಿದೆ ಮತ್ತು ಐಎಎಸ್ ಅಧಿಕಾರಿಯಾಗುವ ಭಾಗ್ಯ ಸಿಕ್ಕಿತು. ಈ ಸೇವೆಯಲ್ಲಿ ಬಹಳಷ್ಟು ಕೆಲಸ ಮಾಡುವ ಅವಕಾಶ ಸಿಕ್ಕಿತು ಮತ್ತು ಸಾಕಷ್ಟು ಕಲಿತೆ. ಧರ್ಮ ಮತ್ತು ಸತ್ಯದ ಪರವಾಗಿ ನಿಲ್ಲುವುದು ಆಯ್ಕೆಯಲ್ಲ, ಅದೊಂದು ಕರ್ತವ್ಯ ಎಂಬುದನ್ನು ದೇವರಿಯಾ ಜಿಲ್ಲೆ ಕಲಿಸಿಕೊಟ್ಟಿತು. ಅಸಾಧ್ಯ ಎನ್ನುವುದು ಯಾವುದೂ ಇಲ್ಲ, ಅದು ಕೇವಲ ಅಭಿಪ್ರಾಯವಷ್ಟೇ ಎಂಬುದನ್ನು ಮಿರ್ಜಾಪುರ ಜಿಲ್ಲೆಯು ತಿಳಿಸಿಕೊಟ್ಟಿತು' ಎಂದು ತಮ್ಮ ಆಡಳಿತದ ಅನುಭವಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

'ಈ ಶಕ್ತಿ ಯಾವ ಅಧಿಕಾರ ಅಥವಾ ಹುದ್ದೆಯಿಂದಲೂ ಬರುವುದಿಲ್ಲ, ಅದು ದೇವರ ಕೃಪೆ ಮತ್ತು ಜನರ ನಂಬಿಕೆಯಿಂದ ಮಾತ್ರ ಬರುತ್ತದೆ. ಎಲ್ಲಕ್ಕಿಂತ ದೊಡ್ಡ ಕಲಿಕೆ ಏನೆಂದರೆ, ನನಗಾಗಿ ನಾನು ಕಂಡಿದ್ದ ಕನಸುಗಳು ಈಗಾಗಲೇ ನನಸಾಗಿದ್ದವು. ಇನ್ನು ಮುಂದೆ ನಾನು ನನ್ನ ಜನರಿಗಾಗಿ ಕಂಡ ಕನಸುಗಳನ್ನು ಜೀವಿಸಬೇಕಿತ್ತು. ಯಾವ ಕುಟುಂಬಕ್ಕೆ ಮೊದಲ ಬಾರಿಗೆ ಭೂಮಿಯ ಹಕ್ಕು ಸಿಕ್ಕಿತೋ ಅವರ ಕಣ್ಣುಗಳಲ್ಲಿ ನೀರು ನೋಡಿದ್ದೆ. ಯಾವ ರೈತನ ಹೊಲಕ್ಕೆ ನೀರು ತಲುಪಿತೋ ಆ ಕ್ಷಣದಲ್ಲಿ ಅವರ ಕಷ್ಟ ಸುಖಗಳಲ್ಲಿ ಜೊತೆಯಾಗಿ ನಿಂತೆ. ಆಗ ನನಗೆ ಅರ್ಥವಾಗಿದ್ದು ಏನೆಂದರೆ, ಪ್ರತಿಯೊಂದು ಸರ್ಕಾರಿ ಫೈಲ್‌ನ ಹಿಂದೆಯೂ ಒಬ್ಬ ಜೀವಂತ ಮನುಷ್ಯನಿದ್ದಾನೆ ಮತ್ತು ಆ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವುದೇ ನಿಜವಾದ ನ್ಯಾಯ. ನನಗೆ ಸಿಕ್ಕ ಅಪಾರ ಪ್ರೀತಿ, ಗೌರವ ಮತ್ತು ಸಿಹಿ ನೆನಪುಗಳಿಂದ ನನ್ನ ಮಡಿಲು ತುಂಬಿದೆ. ಇದಕ್ಕೆ ನನ್ನ ಜೊತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ ನನ್ನ ಸಹೋದ್ಯೋಗಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಶ್ರಮವೇ ಕಾರಣ' ಎಂದು ಬರೆದುಕೊಂಡಿದ್ದಾರೆ.

ಪ್ರಸ್ತುತವಾಗಿ ದಿವ್ಯಾ ಮಿತ್ತಲ್ ನೀಡಿರುವ ರಾಜೀನಾಮೆಯನ್ನು ಉತ್ತರ ಪ್ರದೇಶ ಸರ್ಕಾರವು ಕೇಂದ್ರ ಗೃಹ ಸಚಿವಾಲಯದ ಅನುಮೋದನೆಗೆ ಶಿಫಾರಸು ಮಾಡಿದ್ದು, ಅಂತಿಮ ನಿರ್ಧಾರ ಕಾಯ್ದಿರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries