ನವದೆಹಲಿ: ಶೇ.90ಕ್ಕೂ ಅಧಿಕ ಬ್ಯಾಂಕ್ ಸಿಬ್ಬಂದಿಯನ್ನು ಪ್ರತಿನಿಧಿಸುವ ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆಯು(ಯುಎಫ್‌ಬಿಯು) ಐದು ದಿನಗಳ ಬ್ಯಾಂಕಿಂಗ್ ವಾರ ಮತ್ತು ಸರ್ಕಾರದ ಪರಿಷ್ಕೃತ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಗೆ ಸಂಬಂಧಿಸಿದ ಬಾಕಿಯಿರುವ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸರಣಿ ಮುಷ್ಕರಗಳನ್ನು ಘೋಷಿಸಿದೆ.
ಯುಎಫ್‌ಬಿಯು ಸೆ.11ರಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದು,ಬಳಿಕ ಸೆ.28ರಿಂದ 30ರವರೆಗೆ ಮೂರು ದಿನಗಳ ಮುಷ್ಕರ ನಡೆಯಲಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅ.26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಯೂನಿಯನ್‌ಗಳು ಘೋಷಿಸಿವೆ.
ವೇದಿಕೆಯು ಏಳು ಯೂನಿಯನ್‌ಗಳನ್ನು ಒಳಗೊಂಡಿದ್ದು, ಸಾರ್ವಜನಿಕ ವಲಯ, ಖಾಸಗಿ, ವಿದೇಶಿ, ಪ್ರಾದೇಶಿಕ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್‌ಗಳ ಉದ್ಯೋಗಿಗಳನ್ನು ಪ್ರತಿನಿಧಿಸುತ್ತದೆ ಎಂದು ಯುಎಫ್‌ಬಿಯು ಹೇಳಿಕೆಯಲ್ಲಿ ತಿಳಿಸಿದೆ.
ಐದು ದಿನಗಳ ಬ್ಯಾಂಕಿಂಗ್ ವಾರವನ್ನು ಜಾರಿಗೆ ತರುವುದು, ಸರಕಾರದ ಪಿಐಎಲ್ ಯೋಜನೆಯನ್ನು ಹಿಂಪಡೆಯುವುದು, ದ್ವಿಪಕ್ಷೀಯ ಚರ್ಚೆಗಳ ಮೂಲಕ ಪ್ರೋತ್ಸಾಹಕ ಯೋಜನೆಯನ್ನು ಪರಿಷ್ಕರಿಸುವುದು ಮತ್ತು ಬಾಕಿ ಉಳಿದಿರುವ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವುದು ಯೂನಿಯನ್‌ಗಳ ನಾಲ್ಕು ಪ್ರಮುಖ ಬೇಡಿಕೆಗಳಾಗಿವೆ.
ಐದು ದಿನಗಳ ಬ್ಯಾಂಕಿಂಗ್ ವಾರದ ಬೇಡಿಕೆಯು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಯೂನಿಯನ್‌ಗಳ ಪ್ರಕಾರ, 2015ರಲ್ಲಿ 2ನೇ ಮತ್ತು 4ನೇ ಶನಿವಾರಗಳನ್ನು ರಜಾದಿನಗಳೆಂದು ಘೋಷಿಸಿದಾಗಲೇ ಐದು ದಿನಗಳ ವಾರಕ್ಕೆ ಬದಲಾಗಲು ಬ್ಯಾಂಕ್‌ಗಳು ತಾತ್ವಿಕವಾಗಿ ಒಪ್ಪಿಕೊಂಡಿದ್ದವು. ಈ ವಿಷಯವನ್ನು 2020ರಲ್ಲಿ ಮರುಪರಿಶೀಲಿಸಲಾಗಿತ್ತು ಮತ್ತು ಮಾರ್ಚ್ 8,2024ರಂದು ಸಹಿ ಮಾಡಿದ ವೇತನ ಒಪ್ಪಂದದ ಮೂಲಕ ಅಧಿಕೃತಗೊಳಿಸಲಾಗಿತ್ತು.
ಈ ವ್ಯವಸ್ಥೆಯಡಿ, ಎಲ್ಲ ಶನಿವಾರಗಳನ್ನು ರಜಾದಿನಗಳೆಂದು ಘೋಷಿಸಲು ಪ್ರತಿಯಾಗಿ ಬ್ಯಾಂಕ್ ಉದ್ಯೋಗಿಗಳು ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಹೆಚ್ಚುವರಿಯಾಗಿ 40 ನಿಮಿಷಗಳ ಕೆಲಸ ಮಾಡಲು ಒಪ್ಪಿಕೊಂಡಿದ್ದರು. ಈ ಒಪ್ಪಂದವನ್ನು ಎರಡು ವರ್ಷಗಳ ಹಿಂದೆ ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿತ್ತು,ಆದರೆ ಇದುವರೆಗೂ ಸರಕಾರದ ಅನುಮೋದನೆಗಾಗಿ ಕಾಯುತ್ತಿದೆ ಎಂದು ಯೂನಿಯನ್‌ಗಳು ತಿಳಿಸಿವೆ.

