ನವದೆಹಲಿ: ಕರ್ನಾಟಕದಲ್ಲಿರುವ 865 ಮರಾಠಿ ಭಾಷಿಕ ಹಳ್ಳಿಗಳು ಮತ್ತು ಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಆಗ್ರಹಿಸಿ 2004ರಲ್ಲಿ ಸಲ್ಲಿಸಲಾಗಿರುವ ಅರ್ಜಿಯ ಶೀಘ್ರ ವಿಚಾರಣೆ ನಡೆಸುವಂತೆ ಮಹಾರಾಷ್ಟ್ರ ಸರಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಆ ಪ್ರಕರಣದ ವಾದ-ಪ್ರತಿವಾದಗಳು ಈಗಾಗಲೇ ಮುಕ್ತಾಯಗೊಂಡಿವೆ ಹಾಗೂ ಅದರ ವಿಚಾರಣೆಯನ್ನು ಈಗ ಪುನರಾರಂಭಿಸಬೇಕು ಎಂದು ಮಹಾರಾಷ್ಟ್ರ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಯಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠಕ್ಕೆ ಮನವಿ ಮಾಡಿದರು.
ಮರಾಠಿ ಮಾತನಾಡುವ ಜನರಿರುವ 865 ಹಳ್ಳಿಗಳು ಕರ್ನಾಟಕದಲ್ಲಿವೆ ಹಾಗೂ ಇದು ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ಪುನರ್ವಿಂಗಡಿಸಿದ ಮೂಲ ತತ್ವಕ್ಕೆ ವಿರುದ್ಧವಾಗಿದೆ ಎಂದು ವಕೀಲರು ವಾದಿಸಿದರು.
ಪ್ರಕರಣವನ್ನು ಪರಿಶೀಲಿಸುವುದಾಗಿ ಹೇಳಿದ ಮುಖ್ಯ ನ್ಯಾಯಮೂರ್ತಿ, ''ವಿಚಾರಣೆಗೆ ಪಟ್ಟಿ ಮಾಡುವ ಕುರಿತು ನಾನು ಯಾವುದೇ ಭರವಸೆ ನೀಡಲಾರೆ'' ಎಂದರು.
ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯಲ್ಲಿ ಮರಾಠಿ ಭಾಷಿಕ ಹಳ್ಳಿಗಳು ಮತ್ತು ಪಟ್ಟಣಗಳಿದ್ದು, ಅವು ಪ್ರಸ್ತುತ ಕರ್ನಾಟಕದ ಆಡಳಿತಕ್ಕೆ ಒಳಪಟ್ಟಿವೆ.
ಮರಾಠಿ ಹಳ್ಳಿಗಳು ಮತ್ತು ಪಟ್ಟಣಗಳ ಮೇಲೆ ಕರ್ನಾಟಕದ ನಿಯಂತ್ರಣವನ್ನು ಪ್ರಶ್ನಿಸಿ ಹಾಗೂ 1956ರ ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿ ಮಹಾರಾಷ್ಟ್ರವು ಸುಪ್ರೀಂ ಕೋರ್ಟ್‌ನಲ್ಲಿ ಮೂಲ ದಾವೆಯನ್ನು ಹೂಡಿತ್ತು.
1956ರ ರಾಜ್ಯಗಳ ಪುನವಿರ್ಂಗಡಣಾ ಕಾಯ್ದೆಯ ಅಡಿಯಲ್ಲಿ, ಭಾಷೆಯ ಆಧಾರದಲ್ಲಿ ರಾಜ್ಯಗಳ ಗಡಿಗಳನ್ನು ಮರು ಗುರುತಿಸಲಾಯಿತು. ಕನ್ನಡ ಭಾಷಿಕರ ಪ್ರಾಬಲ್ಯವಿದ್ದ ಕಾರಣದಿಂದಾಗಿ ಬೆಳಗಾವಿಯನ್ನು ಅಂದಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ) ಸೇರಿಸಲಾಯಿತು. ಪಕ್ಕದ ಮರಾಠಿ ಪ್ರದೇಶಗಳು ಮಹಾರಾಷ್ಟ್ರದಲ್ಲಿಯೇ ಉಳಿದುಕೊಂಡವು.

