HEALTH TIPS

ಇಂದು 20ನೇ ಆವೃತ್ತಿಯ ಏಶ್ಯನ್ ಗೇಮ್ಸ್ ಉದ್ಘಾಟನೆ: ಮನು ಭಾಕರ್, ತಜಿಂದರ್‌ಪಾಲ್ ಸಿಂಗ್ ಭಾರತದ ಧ್ವಜಧಾರಿಗಳು

ಟೋಕಿಯೊ: ಜಪಾನ್‌ನ ಐಚಿ-ನಗೋಯಾದಲ್ಲಿ ಶನಿವಾರ ಆರಂಭವಾಗಲಿರುವ 20ನೇ ಆವೃತ್ತಿಯ ಏಶ್ಯನ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ವಿಜೇತ ಶೂಟರ್ ಮನು ಭಾಕರ್ ಹಾಗೂ ಶಾಟ್‌ಪುಟ್ ಪಟು ತಜಿಂದರ್‌ಪಾಲ್ ಸಿಂಗ್ ತೂರ್ ಭಾರತದ ಧ್ವಜಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. 


2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವಳಿ ಕಂಚಿನ ಪದಕ ಜಯಿಸಿದ್ದ ಭಾಕರ್ ಏಶ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 10 ಮೀ. ಏರ್ ಪಿಸ್ತೂಲ್, 25 ಮೀ. ಪಿಸ್ತೂಲ್ ಹಾಗೂ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ ಟೀಮ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಒಂದೇ ಒಲಿಂಪಿಕ್ ಗೇಮ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಅತ್ಲೀಟ್ ಆಗಿದ್ದಾರೆ.

2018ರ ಜಕಾರ್ತ ಗೇಮ್ಸ್ ಹಾಗೂ 2023ರ ಹಾಂಗ್‌ಝೌ ಗೇಮ್ಸ್ ನಂತರ ಪುರುಷರ ಶಾಟ್‌ಪುಟ್‌ನಲ್ಲಿ ಏಶ್ಯನ್ ಗೇಮ್ಸ್‌ನಲ್ಲಿ ಸತತ ಮೂರನೇ ಬಾರಿ ಚಿನ್ನದ ಪದಕ ಜಯಿಸುವತ್ತ ಚಿತ್ತ ಹರಿಸಿರುವ ತಜಿಂದರ್‌ಪಾಲ್ ಎರಡನೇ ಧ್ವಜಧಾರಿಯಾಗಲಿದ್ದಾರೆ ಎಂದು ಭಾರತದ ಅತ್ಲೆಟಿಕ್ಸ್ ಒಕ್ಕೂಟ ದೃಢಪಡಿಸಿದೆ.

ಸೆ.19ರಿಂದ ಅಕ್ಟೋಬರ್ 4ರ ತನಕ ನಡೆಯಲಿರುವ ಏಶ್ಯನ್ ಗೇಮ್ಸ್‌ನಲ್ಲಿ 500ಕ್ಕೂ ಅಧಿಕ ಭಾರತೀಯ ಅತ್ಲೀಟ್‌ಗಳು 36 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. 2023ರಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಭಾರತವು 28 ಚಿನ್ನ ಸಹಿತ ಒಟ್ಟು 106 ಪದಕಗಳನ್ನು ಜಯಿಸಿತ್ತು.

''ಮನು ಭಾಕರ್ ಭಾರತ ಧ್ವಜಧಾರಿಯಾಗಿದ್ದಾರೆ'' ಎಂದು ಭಾರತದ ಚೀಫ್ ಡಿ ಮಿಶನ್ ಸಹದೇವ್ ಯಾದವ್ ದೃಢಪಡಿಸಿದರು.

ಈ ಬಾರಿಯ ಏಶ್ಯನ್ ಗೇಮ್ಸ್‌ನಲ್ಲಿ 45 ದೇಶಗಳ ಅಂದಾಜು 10,840 ಅತ್ಲೀಟ್‌ಗಳು 43 ಕ್ರೀಡೆಗಳಲ್ಲಿ 469 ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ. ಜಪಾನ್ ದೇಶವು ಮೂರನೇ ಬಾರಿ ಏಶ್ಯನ್ ಗೇಮ್ಸ್ ಆತಿಥ್ಯವಹಿಸಲಿದೆ. ಈ ಹಿಂದೆ ಟೋಕಿಯೊ(1958)ಹಾಗೂ ಹಿರೋಶಿಮಾ(1994)ನಗರಗಳು ಏಶ್ಯನ್ ಕ್ರೀಡಾಕೂಟವನ್ನು ಆಯೋಜಿಸಿದ್ದವು.

2023ರ ಆವೃತ್ತಿಯ ಗೇಮ್ಸ್‌ನಲ್ಲಿ 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚಿನ ಪದಕಗಳನ್ನು ಜಯಿಸಿದ್ದ ಭಾರತವು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಜಪಾನ್‌ನಲ್ಲಿ ತನ್ನ ಪ್ರದರ್ಶನ ಕಾಯ್ದುಕೊಳ್ಳುವ ಗುರಿ ಇಟ್ಟುಕೊಂಡಿದೆ.

ಜಾವೆಲಿನ್ ಎಸೆತದ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಮೊಣಕಾಲು ನೋವಿನಿಂದಾಗಿ ಏಶ್ಯನ್ ಗೇಮ್ಸ್‌ನಿಂದ ಹಿಂದೆ ಸರಿದ ಹೊರತಾಗಿಯೂ ಭಾರತೀಯರ ತಂಡದಲ್ಲಿ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದಿರುವ ಐವರು ಕ್ರೀಡಾಪಟುಗಳಿದ್ದಾರೆ.

ಬ್ಯಾಡ್ಮಿಂಟನ್ ತಂಡಕ್ಕೆ ಪಿ.ವಿ. ಸಿಂಧು, ವೇಟ್‌ಲಿಫ್ಟಿಂಗ್ ತಂಡಕ್ಕೆ ಮೀರಾಬಾಯಿ ಚಾನು ನೇತೃತ್ವ ವಹಿಸಿದ್ದಾರೆ. ಮನು ಭಾಕರ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಲವ್ಲೀನಾ ಬೊರ್ಗೊಹೈನ್ ಬಾಕ್ಸಿಂಗ್ ಹಾಗೂ ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಈ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಏಳು ಚಿನ್ನ ಸಹಿತ ಒಟ್ಟು 10 ಪದಕಗಳನ್ನು ಜಯಿಸಿ ದಾಖಲೆ ನಿರ್ಮಿಸಿದ್ದ ಭಾರತೀಯ ಬಾಕ್ಸರ್‌ಗಳು ಏಶ್ಯನ್ ಗೇಮ್ಸ್‌ಗೆ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ಟಿದ್ದಾರೆ.

ಅತ್ಲೆಟಿಕ್ಸ್ ವಿಭಾಗವು ಪ್ರಮುಖ ಪಾತ್ರವಹಿಸಲು ಸಜ್ಜಾಗಿದ್ದು, 70ಕ್ಕೂ ಅಧಿಕ ಟ್ರ್ಯಾಕ್ ಆಯಂಡ್ ಫೀಲ್ಡ್ ಅತ್ಲೀಟ್‌ಗಳು ಭಾಗವಹಿಸಲಿದ್ದಾರೆ. ಗುಲ್ವೀರ್ ಸಿಂಗ್, ತೇಜಸ್ವಿನ್ ಶಂಕರ್, ಒಲಿಂಪಿಯನ್ ಸರ್ವೇಶ್ ಕುಶಾರೆ ಹಾಗೂ ತಜಿಂದರ್ ಪಾಲ್ ಸಿಂಗ್ ತೂರ್ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

ಭಾರತವು ಕ್ರಿಕೆಟ್ ಹಾಗೂ ಕಬಡ್ಡಿಗಳಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿನ ಪ್ರಶಸ್ತಿಗಳನ್ನು ಹಾಗೂ ಪುರುಷರ ಹಾಕಿ ಕಿರೀಟವನ್ನು ತನ್ನಲ್ಲೇ ಉಳಿಸಿಕೊಳ್ಳುವ ತವಕದಲ್ಲಿದೆ.

ಟಿ-20 ಸ್ಪರ್ಧಾವಳಿಯಲ್ಲಿ ಪುರುಷರ ಕ್ರಿಕೆಟ್ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗಿದ್ದಾರೆ. 15ರ ವಯಸ್ಸಿನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ತಂಡದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಮಹಿಳೆಯರ ಕ್ರಿಕೆಟ್ ತಂಡವನ್ನು ಟಿ-20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.

ಪುರುಷರ ಹಾಗೂ ಮಹಿಳೆಯರ ಹಾಕಿ ಪಂದ್ಯಾವಳಿಗಳು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿ ಪರಿಣಮಿಸಿದೆ. ಇದರಲ್ಲಿ ಗೆಲ್ಲುವ ತಂಡಗಳು ನೇರ ಪ್ರವೇಶ ಪಡೆಯಲಿವೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರ್ಚರಿ, ಸೀಲಿಂಗ್, ಸ್ಕ್ವಾಷ್, ಸರ್ಫಿಂಗ್ ಹಾಗೂ ಟೆನಿಸ್‌ನಲ್ಲಿ ಅರ್ಹತೆ ಪಡೆಯುವ ಅವಕಾಶಗಳು ಮುಕ್ತವಾಗಿವೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries