ನವದೆಹಲಿ: ಭಾರತವು ಪ್ರವಾಹಪೀಡಿತ ನೇಪಾಳಕ್ಕೆ 5.5 ಟನ್ ಅಗತ್ಯ ಔಷಧಿಗಳು ಸೇರಿದಂತೆ ಐದನೆ ಹಂತದ ಪರಿಹಾರ ಸಾಮಗ್ರಿಗಳನ್ನು ಬುಧವಾರ ರವಾನಿಸಿದೆ. ಇದರೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸಾಧನ ಸಜ್ಜಿತ 11 ಸದಸ್ಯರ ತಂಡವನ್ನೂ ನೇಪಾಳಕ್ಕೆ ರವಾನಿಸಲಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, "ವಿಶೇಷ ಸಾಧನಗಳೊಂದಿಗೆ ಸಜ್ಜಿತವಾಗಿರುವ 11 ಮಂದಿ ಸದಸ್ಯರ ತಂಡ ಹಾಗೂ 5.5 ಟನ್ ಅಗತ್ಯ ಔಷಧಿಗಳನ್ನೊಳಗೊಂಡ ಭಾರತದ ಐದನೆ ವಿಮಾನ ನೇಪಾಳಕ್ಕೆ ನಿರ್ಗಮಿಸಿತು" ಎಂದು ಹೇಳಿದ್ದಾರೆ.
ಈ ಹೊಸ ಸರಕಿನೊಂದಿಗೆ ಭಾರತವು ಇಲ್ಲಿಯವರೆಗೆ ನೇಪಾಳಕ್ಕೆ 68.5 ಟನ್ ಪರಿಹಾರ ಸಾಮಗ್ರಿಗಳನ್ನು ರವಾನಿಸಿದಂತಾಗಿದೆ. ಇದಲ್ಲದೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಸಾಧನಗಳೊಂದಿಗೆ ಸಜ್ಜಿತವಾಗಿರುವ ತಾಂತ್ರಿಕ ತಂಡದೊಂದಿಗೆ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನೂ ನೇಪಾಳಕ್ಕೆ ರವಾನಿಸಲಾಗಿದೆ.
ಆಗಸ್ಟ್ 26ರಂದು ನೇಪಾಳಕ್ಕೆ ದಿಢೀರ್ ಪ್ರವಾಹ ಅಪ್ಪಳಿಸಿದ ಬಳಿಕ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಲೇಂದ್ರ ಶಾರೊಂದಿಗೆ ಮಾತುಕತೆ ನಡೆಸಿದ್ದರು. ಇದರ ಬೆನ್ನಿಗೇ, ಮೊದಲ ಹಂತದ ಪರಿಹಾರ ಸಾಮಗ್ರಿಗಳು ನೇಪಾಳಕ್ಕೆ ರವಾನೆಯಾಗಿದ್ದವು. ಈ ಮಾತುಕತೆಯ ವೇಳೆ ನೇಪಾಳಕ್ಕೆ ಅಗತ್ಯವಿರುವ ಎಲ್ಲ ಮಾನವೀಯ ನೆರವನ್ನೂ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಸರಕಾರಕ್ಕೆ ಭರವಸೆ ನೀಡಿದ್ದರು.

